ಮಂಗಳೂರು, ಫೆ 26: ನಗರದಲ್ಲಿ ಪ್ರಿ ಪೇಯ್ಡ್ ವಿದ್ಯುತ್ ವ್ಯವಸ್ಥೆ ಜಾರಿಗೆ ತರಲು ನಿರ್ಧರಿಸಲಾಗಿದ್ದು, ಏಪ್ರಿಲ್ ವೇಳೆಗೆ ಈ ಯೋಜನೆ ಕಾರ್ಯಗತಗೊಳ್ಳಲಿದೆ ಎನ್ನುವ ಮಾಹಿತಿ ಲಭಿಸಿದೆ.
ಮಂಗಳೂರಿನಲ್ಲಿ ಈ ಸ್ಮಾರ್ಟ್ ಯೋಜನೆಯನ್ನು ಅಳವಡಿಸಲು ಸಿದ್ದತೆ ನಡೆಸಲಾಗುತ್ತಿದ್ದು, ತಾತ್ಕಾಲಿಕವಾಗಿ ವಿದ್ಯುತ್ ಬಳಕೆಯಾಗುವ ಪ್ರದೇಶಗಳಲ್ಲಿ ಈ ಯೋಜನೆ ಜಾರಿಗೆ ಬರಲಿದೆ. ಮುಂದಿನ ದಿನಗಳಲ್ಲಿ ಜಾತ್ರೆ, ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ಬಳಕೆಯಾಗುವ ಮೀಟರ್ ಗಳನ್ನು ಆರಂಭದಲ್ಲಿ ಪ್ರಿಪೇಯ್ಡ್ ಮಾಡಲು ನಿರ್ಧರಿಸಲಾಗಿದ್ದು, ಪ್ರಿ- ಪೇಯ್ಡ್ ಮೀಟರ್ ನಿಂದ ವಿದ್ಯುತ್ ಉಳಿತಾಯವಾಗಲಿದೆ,
ಈ ರೀತಿಯ ಯೋಜನೆಯನ್ನು ಮೆಸ್ಕಾಂ ಜಾರಿಗೆ ತರಲು ಯೋಜನೆ ರೂಪಿಸಿದ್ದು, ಇನ್ನು ಮುಂದೆ ಎಷ್ಟು ಹಣ ರೀಚಾರ್ಜ್ ಮಾಡುತ್ತೇವೆಯೋ ಅಷ್ಟು ವಿದ್ಯುತ್ ಮಾತ್ರ ಬಳಸಿಕೊಳ್ಳಬಹುದಾಗಿದೆ. ಮೊಬೈಲ್ ಕರೆನ್ಸಿ ಪ್ರಿಪೇಯ್ಡ್ ನಂತೆಯೆ ಇದು ಕಾರ್ಯ ನಿರ್ವಹಿಸಲಿದೆ.
ಇನ್ನು ಮುಂದೆ ಪ್ರತಿ ಮನೆ ಮನೆಗೆ ಮೀಟರ್ ರೀಡರ್ ಬಂದು ಬಿಲ್ ನೀಡುವ ವ್ಯವಸ್ಥೆ ಇಲ್ಲಿಲ್ಲ. ಮನೆಯ ಡಿಟಿಎಚ್ ಗಳನ್ನು ರಿಚಾರ್ಜ್ ಮಾಡಿದಂತೆ ಇಲ್ಲೂ ಕೂಡ ಮೊದಲು ಹಣ ತುಂಬುವ ವ್ಯವಸ್ಥೆ ಇದೆ. ಹಣ ಮುಗಿಯುತ್ತಿದ್ದಂತೆ ವಿದ್ಯುತ್ ಕಡಿತಗೊಳ್ಳುತ್ತದೆ.
ಮಂಗಳೂರಿನಲ್ಲಿ ಜಾರಿಗೆ ಬರಲಿರುವ ಈ ನೂತನ ವ್ಯವಸ್ಥೆಗೆ ಈಗಾಗಲೇ ಬಳಕೆಯಲ್ಲಿರುವ ಮೀಟರ್ ಬಳಸಲು ಸಾಧ್ಯವಿಲ್ಲ. ಇದಕ್ಕೆ ಪ್ರತ್ಯೇಕ ಸ್ಮಾರ್ಟ್ ಮೀಟರ್ ಆಳವಡಿಸುವ ಅವಶ್ಯಕತೆ ಇದೆ. ಟಿವಿ ಸೆಟ್ ಆಪ್ ಬಾಕ್ಸ್ ನಲ್ಲಿರುವಂತೆ ಸ್ಮಾರ್ಟ್ ಕಾರ್ಡ್ ಈ ಮೀಟರ್ ನಲ್ಲಿರುತ್ತದೆ. ಈ ಮೀಟರ್ ಗೆ 8 ಸಾವಿರ ರೂಪಾಯಿ ಖರ್ಚಾಗಲಿದ್ದು, ಆ ಹಣವನ್ನು ಮೆಸ್ಕಾಂ ಭರಿಸಲಿದೆ. ಆದರೆ, ಮೀಟರ್ ನಿರ್ವಹಣಾ ವೆಚ್ಚ 75 ರೂಪಾಯಿಯನ್ನು ಮೆಸ್ಕಾಂಗೆ ಪ್ರತಿ ತಿಂಗಳು ಕಟ್ಟಬೇಕಿದೆ.