ಮಂಗಳೂರು, ಮಾ 29 (DaijiworldNews/SM): ಮನೆಯಿಂದ ಹೊರಗಡೆ ಬಂದವರಿಗೆ ಬಹುತೇಕ ಕಡೆಗಳಲ್ಲಿ ಪೊಲೀಸರು ಲಾಠಿ ರುಚಿ ತೋರಿಸಿರೋ ಸುದ್ದಿಗಳನ್ನು ಮತ್ತೆ ಮತ್ತೆ ನಾವು ನೋಡುತ್ತಿರುತ್ತೇವೆ. ಆದರೆ, ಅವರ ಮಧ್ಯೆ ಮಾನವೀಯ ಮೌಲ್ಯಗಳನ್ನು ಹೊಂದಿರುವ ಹಲವಾರು ಮಂದಿ ಇದ್ದಾರೆ. ಮಂಗಳೂರಿನಲ್ಲಿ ಸಂಬಂಧಿಕರ ಮನೆಯಲ್ಲಿ ಬಾಕಿಯಾಗಿದ್ದ ಪುಟ್ಟ ಮಕ್ಕಳಿಬ್ಬರನ್ನು ಅವರ ತಂದೆ-ತಾಯಿಯ ಮಡಿಲಿಗೆ ಸೇರಿಸುವ ಮೂಲಕ ಪೊಲೀಸ್ ಅಧಿಕಾರಿಯೊಬ್ಬರು ಮಾನವೀಯತೆ ಮೆರೆದಿದ್ದಾರೆ.
ಇವರು ಮಂಗಳೂರು ಕದ್ರಿ ಠಾಣೆಯ ಎ ಎಸ್ ಐ ಸಂತೋಷ್ ಕುಮಾರ್ ಪಡೀಲ್. ಎಲ್ಲರಂತೆ ಕೊರೊನಾ ಸಂದರ್ಭದಲ್ಲಿ ಅಲರ್ಟ್ ಆಗಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಆದರೆ, ದಿನದ ಹಿಂದೆ ಸ್ನೇಹಿತರೊಬ್ಬರು ಮಾಡಿರುವ ಕರೆ, ಅವರನ್ನು ಈ ಕಾರ್ಯಕ್ಕೆ ಪ್ರೇರೆಪಿಸಿದೆ. ಅಷ್ಟಕ್ಕೂ ಅವರು ಮಾಡಿರುವ ಕಾರ್ಯವೇನು ಅಂದ್ರೆ, ಮಂಗಳೂರಿನ ಸಂಬಂಧಿಕರ ಮನೆಗೆ ಬಂದಿದ್ದ ಪುಟ್ಟ ಮಕ್ಕಳನ್ನು ಸ್ವಂತ ರಿಸ್ಕ್ ನಲ್ಲಿ ಕೇರಳಕ್ಕೆ ಕಳುಹಿಸಿರುವುದು.
ಇದು ಹೇಗೆ ಸಾಧ್ಯವಾಯಿತು ಎಂದು ನೀವು ಪ್ರಶ್ನಿಸಬಹುದು. ಹೌದು, ಕದ್ರಿ ಠಾಣಾ ಎ ಎಸ್ ಐ ಸಂತೋಷ್ ಕುಮಾರ್ ಪಡೀಲ್, ತಮ್ಮ ಖಾಸಗಿ ಕಾರಿನಲ್ಲಿ ಮಂಗಳೂರಿನಲ್ಲಿದ್ದ ಪುಟ್ಟ ಮಕ್ಕಳನ್ನು ತಲಪಾಡಿ ಟೋಲ್ ಗೇಟ್ ತನಕ ಕರೆದೊಯ್ದಿದ್ದಾರೆ. ಬಳಿಕ ಅಲ್ಲಿಗೆ ಆಗಮಿಸಿದ್ದ ಮಕ್ಕಳ ಪೋಷಕರು ತಮ್ಮ ಮಕ್ಕಳನ್ನು ಕರೆದೊಯ್ದಿದ್ದಾರೆ. ನಮಗೆ ಇದು ಸಾಮಾನ್ಯ ವಿಷಯವೆಂದು ಅನಿಸಿದರೂ, ಆ ಮಕ್ಕಳು ಹಾಗೂ ಪೋಷಕರಿಗೆ ಮಾತ್ರ ದೊಡ್ಡ ಸಂಗತಿಯೇ ಸರಿ.
ಕೇವಲ ಪೊಲೀಸರನ್ನು ದೂರುವುದು, ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುವುದು ಸಾಮಾನ್ಯವಾಗಿದೆ. ಆದರೆ, ಇಂತಹ ಮಾನವೀಯ ಕಾರ್ಯಗಳನ್ನು ಯಾರೂ ಗುರುತಿಸುವ ಗೋಜಿಗೆ ಹೋಗುವುದಿಲ್ಲ. ಸಂತೋಷ್ ಕುಮಾರ್ ಅವರ ಮಾನವೀಯ ಕಾರ್ಯದಿಂದ ಪೊಲೀಸರಲ್ಲಿರುವ ಮತ್ತೊಂದು ಮುಖ, ತಾಯಿ, ಮಕ್ಕಳ ನಡುವಿನ ಬಾಂಧವೈ ಸಮಾಜಕ್ಕೆ ತೆರೆದುಕೊಂಡಂತಾಗಿದೆ.