ಕರಾವಳಿ, ಮಾ 29 (DaijiworldNews/SM): ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಸಿಬ್ಬಂದಿ ಶಂಕರ್ ಸಂಸಿ ಎಂಬವರು ಸ್ಥಳೀಯ ದೇವಸ್ಥಾನವೊಂದರ ಅರ್ಚಕರೊರ್ವರಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆ ನಡೆಸಿದ ಸಿಬ್ಬಂದಿಯನ್ನು ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ. ಲಕ್ಷ್ಮೀ ಪ್ರಸಾದ್ ಆದೇಶ ನೀಡಿದ್ದಾರೆ.
ಬಂಟ್ವಾಳ ಪೊಲೀಸ್ ಉಪವಿಭಾಗಾಧಿಕಾರಿಯಿಂದ ಘಟನೆಯ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ಪಡೆದುಕೊಂಡಿದ್ದಾರೆ. ಅವರ ವರದಿ ಪಡೆದು ಪರಿಶೀಲಿಸಿದ್ದು ಮೇಲ್ನೋಟಕ್ಕೆ ಪೊಲೀಸ್ ಸಿಬ್ಬಂದಿಯ ದುರ್ವರ್ತನೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರು ಅಮಾನತು ಆದೇಶ ನೀಡಿದ್ದಾರೆ. ಘಟನೆಯ ಕುರಿತಂತೆ ಇಲಾಖಾ ಹಂತದಲ್ಲಿ ವಿಚಾರಣೆ ಮುಂದುವರೆದಿದೆ.
ಇನ್ನು ಅರ್ಚಕರ ಮೇಲೆ ಹಲ್ಲೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗುತ್ತಿದ್ದಂತೆ ದಾಯ್ಜಿವರ್ಲ್ಡ್ ವಾಹಿನಿ ಸುದ್ದಿ ಬಿತ್ತರಿಸಿತ್ತು. ಹಾಗೂ ಈ ಬಗ್ಗೆ ಜನಸಾಮಾನ್ಯರು ಕೂಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಪೊಲೀಸ್ ಸಿಬ್ಬಂದಿಯ ಕ್ರಮಕ್ಕೆ ಖಂಡನೆ ವ್ಯಕ್ತವಾಗಿತ್ತು. ಘಟನೆ ಬೆಳಕಿಗೆ ಬಂದು ಕೆಲವೇ ಗಂಟೆಗಳಲ್ಲಿ ಪೊಲೀಸ್ ವರಿಷ್ಠಾಧಿಕಾರಿಗಳು ವರದಿ ಪಡೆದು ಕ್ರಮಕೈಗೊಂಡಿರುವುದು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಕಾರಣವಾಗಿದೆ.
https://www.daijiworld.com/kannada/newsDisplay.aspx?newsID=19916&newsCategory=karvalli