ಕುಂದಾಪುರ, ಮಾ 30 (Daijiworld News/MSP): ಕೊರೋನಾ ನಿಯಂತ್ರಿಸುವಲ್ಲಿ ಸರ್ಕಾರದ ಜೊತೆ ಪೊಲೀಸರು, ಆರೋಗ್ಯ ಇಲಾಖೆ ಹರಸಾಹಸ ಪಡುತ್ತಿದೆ. ಮಾಧ್ಯಮದವರು ಕೂಡಾ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಹಗಲಿರುಳು ದುಡಿಯುತ್ತಿರುವ ಇವರಿಗೆ ಊಟ, ತಿಂಡಿ, ಕುಡಿಯುವ ನೀರು ಸಿಗದಂತ ಸ್ಥಿತಿ ಪ್ರಸ್ತುತ ಇದೆ. ಎಲ್ಲೆಡೆ ಲಾಕ್ ಡೌನ್ ಆಗಿರುವುದರಿಂದ ಜನರ ಸೇವೆ ಮಾಡುತ್ತಿರುವವರಿಗೆ ಆಹಾರವನ್ನು ನೀಡುವ ಮಾನವೀಯ ಕಾರ್ಯವನ್ನು ಕುಂದಾಪುರದ ಪಾರಿಜಾತ ಹೋಟೆಲ್ ಮಾಡುತ್ತಿದೆ.
ಕುಂದಾಪುರದಲ್ಲಿ ಸಾರ್ಥಕ 50 ವರ್ಷ ಗ್ರಾಹಕರ ಸೇವೆಯಲ್ಲಿ ಗುರುತಿಸಿಕೊಂಡಿರುವ ಈ ಹೊಟೇಲ್ ಕೊರೋನಾದ ವಿರುದ್ಧ ಫ್ರೆಂಟ್ ಫೈಟ್ ಮಾಡುತ್ತಿರುವ ಪೊಲೀಸರು, ಡಾಕ್ಟರು, ಮಾಧ್ಯಮದವರಿಗೆ ಬ್ಯಾಕಪ್ ನೀಡುವ ಮಹಾತ್ಕಾರ್ಯಕ್ಕೆ ಮುಂದಾಗಿದೆ. ಪಾರಿಜಾತ ಹೋಟೆಲ್ ಉಚಿತವಾಗಿಯೇ ದಿನಕ್ಕೆ 250 ಕ್ಕೂ ಹೆಚ್ಚು ಊಟ, ಉಪಹಾರ, ಹಣ್ಣು ಬಿಸ್ಕೇಟ್, ನೀರನ್ನು ವಿತರಿಸಿ ಗಮನ ಸಳೆದಿದೆ.
ಪಾರಿಜಾತದ ಮಾಲೀಕರಾದ ರಾಮಚಂದ್ರ ಭಟ್ ಅವರ ಮಾರ್ಗದರ್ಶನದಲ್ಲಿ ಅವರ ಮಗ ಗಣೇಶ ಭಟ್ ದೇಶ ಸೇವೆಯ ಈ ವಿಶಿಷ್ಠ ಕಾರ್ಯಕ್ಕೆ ಮುಂದಾಗಿದ್ದಾರೆ. ಕುಂದಾಪುರ, ಶಂಕರನಾರಾಯಣ, ಅಮಾಸೆಬೈಲು, ಕಂಡ್ಲೂರು, ಕೊಲ್ಲೂರು, ಬೈಂದೂರು, ಗಂಗೊಳ್ಳಿ ಹೀಗೆ ಎಲ್ಲ ಪೊಲೀಸ್ ಠಾಣೆಗಳಿಗೂ ಬೆಳಿಗ್ಗೆ, ಮಧ್ಯಾಹ್ನ ಸಂಜೆ ಅಗತ್ಯ ಆಹಾರವನ್ನು ಸರಬರಾಜು ಮಾಡುತ್ತಿದ್ದಾರೆ.
ಬೆಳಿಗ್ಗೆ 8 ಗಂಟೆಗೆ ಬೆಳಿಗ್ಗೆಯ ಉಪಹಾರ (ದಿನಕ್ಕೊಂದು ರೀತಿ ತಿಂಡಿ), ಮಧ್ಯಾಹ್ನ 12.30 ಕ್ಕೆ ಊಟ (ಅನ್ನ-ಸಾಂಬಾರು), ಜೊತೆಯಲ್ಲಿ ಹಣ್ಣು-ಬಿಸ್ಕೆಟ್-ನೀರು, ರಾತ್ರಿ 8 ಗಂಟೆಯಿಂದ ಊಟವನ್ನು ನೀಡುತ್ತಾರೆ. ಹೊತ್ತಿಗೆ 200ಕ್ಕೂ ಹೆಚ್ಚು ಊಟವನ್ನು ನೀಡಲಾಗುತ್ತಿದೆ. ಈ ಸೇವೆಗೆ ನಾಲ್ಕು ಮಾರ್ಗಸೂಚಿಯಲ್ಲಿ ಸರಬರಾಜುವಿಗೆ ಐದು ವಾಹನಗಳ ಏರ್ಪಾಡು ಮಾಡಲಾಗಿದೆ. ತಾಜಾ-ಸ್ವಾದಿಷ್ಟ ಆಹಾರವನ್ನು ಸುರಕ್ಷಿತ ರೀತಿಯಲ್ಲಿ ವಿತರಣೆ ಮಾಡಲಾಗುತ್ತಿದೆ.
ಈ ಸೇವೆ ದಿನದ 24 ಗಂಟೆಯೂ ಇರುತ್ತದೆ. 15 ಜನರ ತಂಡ ಈ ಮಹತ್ಕಾರ್ಯದಲ್ಲಿ ಶ್ರಮಿಸುತ್ತಿದೆ. 4 ಜನ ನುರಿತ ಬಾಣಸಿಗರು ಅಡುಗೆ ತಯಾರಿಯಲ್ಲಿ ನಿರತರಾಗಿದ್ದಾರೆ. ಸುರಕ್ಷಿತ ಮಾದರಿಯಲ್ಲಿ ಆಹಾರದ ಸಿದ್ಧ ಪೊಟ್ಟಣಗಳಾಗಿ ಮಾಡಿ ಹಂಚಲಾಗುತ್ತಿದೆ.
ಕೊರೋನಾ ವಿರುದ್ಧ ಹೋರಾಟದಲ್ಲಿ ನಿರತರಾದವರಿಗೆ ಆಹಾರದ ಸಮಸ್ಯೆ ಎದುರಾಗಬಾರದು ಎನ್ನುವ ಕಳಕಳಿಯಿಂದ ಪಾರಿಜಾತ ಈ ಕೈಂಕರ್ಯದಲ್ಲಿ ಮುಂದಾಗಿದ್ದು, ಊಟವಿಲ್ಲದೇ ಯಾರೂ ಹಸಿವಿನಿಂದ ಇದ್ದವರು ಕಂಡರೂ ಅವರಿಗೆ ಉಚಿತವಾಗಿ ಆಹಾರವನ್ನು ನೀಡುತ್ತಾರೆ. ವಲಸೆ ಕಾರ್ಮಿಕರಿಗೂ ಆಹಾರ ಸರಬರಾಜು ಮಾಡಲಾಗುತ್ತಿದೆ. ಭಿಕ್ಷುಕರನ್ನು ಹುಡುಕಿ ಆಹಾರ ನೀಡಲಾಗುತ್ತಿದೆ. ಆಹಾರವಿಲ್ಲದೇ ಯಾರು ರಸ್ತೆ ಬದಿಯಲ್ಲಿ ಕಾಣಸಿಕ್ಕರೂ ಅವರಿಗೆ ಆಹಾರ ತಲುಪಿಸಲಾಗುತ್ತಿದೆ.