ಕಾರ್ಕಳ, ಮಾ 30 (Daijiworld News/MSP): ಕೊರೋನಾ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಕಾರ್ಕಳ ತಾಲೂಕು ಆಡಳಿತ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಕಾರ್ಕಳಕ್ಕೆ ವಿದೇಶಗಳಿಂದ ಬಂದಂತಹ ೨೯೫ ವ್ಯಕ್ತಿಗಳನ್ನು ಹೋಂ ಕ್ವಾರಂಟೈನ್ ಎಂದು ಈಗಾಗಲೇ ಗುರುತಿಸಿ ನಿಗಾ ವಹಿಸಲಾಗಿದೆ. ಇದರಲ್ಲಿ 68 ವ್ಯಕ್ತಿಗಳು ಕ್ವಾರಂಟೈನ್ ಅವಧಿಯನ್ನು ಪೂರೈಸಿದ್ದು ಮತ್ತೆ ಸಹ ನಿಗವಹಿಸಲಾಗಿದೆ. ಉಳಿದ 227 ಜನ ಪ್ರಸ್ತುತ ಹೋಂ ಕ್ವಾರಂಟೈನ್ ನಲ್ಲಿ ಇದ್ದಾರೆ. ಈ ಎಲ್ಲಾ ಸಂಗತಿಗಳನ್ನು ದೃಷ್ಠಿಯಲ್ಲಿ ಇಟ್ಟುಕೊಂಡು ಹಾಗು ಈ ವಾರ ಮತ್ತು ಮುಂದಿನ ವಾರ ಕೊರೋನಾ ವ್ಯಾಪಕವಾಗುವ ಹಿನ್ನೆಲೆಯಲ್ಲಿ ಮುಂಜಾಗರುಕತೆಯಿಂದ ಜನರಲ್ಲಿನ ಭೀತಿ, ಆತಂಕ ನಿವಾರಣೆ ಮಾಡಲು ನಾವು ಕಾರ್ಕಳದಲ್ಲಿ ಹಾಸ್ಪಿಟಲ್ ಕ್ವಾರಂಟೈನ್ ಅನ್ನು ಸುಸಜ್ಜಿತವಾಗಿ ಸ್ಥಾಪಿಸಲಾಗುತ್ತಿದೆ ಎಂದು ಶಾಸಕ ಹಾಗೂ ಸರಕಾರದ ಮುಖ್ಯ ಸಚೇಕತ ವಿ.ಸುನೀಲ್ಕುಮಾರ್ ತಿಳಿಸಿದ್ದಾರೆ.
ಹಾಸ್ಪಿಟಲ್ ಕ್ವಾರಂಟೈನ್ ಕೇಂದ್ರವಾಗಿ ಸಂಭಾವ್ಯ ಮುನ್ನೆಚ್ಚರಿಕೆಯಿಂದ ಭುವನೇಂದ್ರ ವಸತಿ ಹಾಸ್ಟೆಲ್ ಅನ್ನು ಸಜ್ಜುಗೊಳಿಸಲಾಗಿದೆ. 50 ಮಂಚ ಮತ್ತು ಹಾಸಿಗೆಗಳು ಈಗಾಗಲೇ ಹಾಸ್ಟೆಲ್ನಲ್ಲಿ ಲಭ್ಯವಿದ್ದು ಇವುಗಳನ್ನು ಬಳಸಿಕೊಳ್ಳಲು ತೀರ್ಮಾನಿಸಿದೆ. ಈ ಕಾರ್ಯಕ್ಕೆ ಹಾಸ್ಟೆಲ್ ಒದಗಿಸಿದ ಭುವನೇಂದ್ರ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಮತ್ತು ಭೋಧಕವರ್ಗಕ್ಕೆ ಶಾಸಕನಾಗಿ ನಾನು ಕೃತಜ್ಙತೆಗಳನ್ನು ಸಲ್ಲಿಸುತ್ತೇನೆ. ಈ ಕೇಂದ್ರದ ನೋಡಲ್ ಅಧಿಕಾರಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜಿಸ್ ಶಶಿಧರ್ ಅವರನ್ನು ನಿಯುಕ್ತಿಗೊಳಿಸಿದ್ದು ತಾಲೂಕು ಆರೋಗ್ಯ ಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದು ನಿರಂತರ ಸೇವೆಯನ್ನು ಒದಗಿಸಲು ನಿರ್ದೇಶಿಸಿದೆ. ನೋಡಲ್ ತಂಡದಲ್ಲಿ ವೈದ್ಯಾಧಿಕಾರಿಗಳು, ಕಿರಿಯ ಅಭಿಯಂತರರು ಇರುತ್ತಾರೆ.
ಕಾರ್ಕಳದಲ್ಲಿ ಪ್ರೈಮರಿ ಸಂಪರ್ಕಗಳು ( ಕೊರೋನಾ ಫಾಸಿಟೀವ್ ಸಂಪರ್ಕದಲ್ಲಿ ಬರುವಂತಹ ಪ್ರಕರಣ ವ್ಯಕ್ತಿಗಳು) ಬರುವಂತಹ ಪ್ರಕರಣಗಳಲ್ಲಿ ಹಾಸ್ಪಿಟಲ್ ಕ್ವಾರಂಟೈನ್ ಮಾಡಲಾಗುವುದು. ಮುಂಜಾಗರೂಕತೆಯಿಂದ ಪುರಸಭೆ ಕಡೆಯಿಂದ ಫಾಗಿಂಗ್ ಮತ್ತು ಸ್ವಚ್ಛತೆ ಮಾಡಿಸಲಾಗಿದೆ. ಅಗತ್ಯ ಮೂಲಭೂತ ಪರಿಕರಗಳು (ಬೆಡ್ ಶೀಟ್, ಹೊದಿಕೆ, ಸ್ವಚ್ಛತಾ ಸಾಮಗ್ರಿಗಳು,ಸ್ಯಾನಿಟರಿ ಸಾಮಗ್ರಿಗಳು,ಮಾಸ್ಕ್,ಬಕೆಟ್,ಮಗ್ಗ್ ಇತ್ಯಾದಿ) ಇವುಗಳಿಗಾಗಿ ಜಿಲ್ಲಾಡಳಿತವನ್ನು ಕೋರಲಾಗಿದ್ದು ಜಿಲ್ಲಾಡಳಿತ ಒದಗಿಸಲಿದೆ.
ಈ ಕೇಂದ್ರವು ಮೂರು ಶಿಪ್ಟ್ ಗಳಲ್ಲಿ ಕಾರ್ಯಾಚರಿಸಲಿದ್ದು ಈ ಮೂರು ಶಿಪ್ಟ್ ಗಳಲ್ಲಿ ನುರಿತ ವೈದ್ಯರು, ವೈದ್ಯ ಸಹಾಯಕರು ದಾದಿಯರು, ಡಿ ಗ್ರೂಪ್ ನೌಕರರು ಸೇವೆಗೆ ವ್ಯವಸ್ಥೆ ಮಾಡಲಾಗಿದೆ. ಶೌಚಾಲಯ, ಸ್ನಾನ ಗೃಹಗಳನ್ನು ಸುಸಜ್ಜಿತವಾಗಿ ಮಾಡಲಾಗಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.