ಬೆಳ್ತಂಗಡಿ, ಮಾ 30 (Daijiworld News/MSP): ಕೊರೊನಾ ಸೋಂಕಿನ ಎಫೆಕ್ಟ್ ಎಲ್ಲೆಡೆ ಪಸರಿಸುತ್ತಿದ್ದಂತೆ ಬೆಳ್ತಂಗಡಿ ತಾಲೂಕಿನಲ್ಲಿ ಒರ್ವ ವ್ಯಕ್ತಿಗೆ ಸೋಂಕು ದೃಢವಾದ ಬೆನ್ನಲ್ಲೇ ಮುನ್ನೆಚ್ಚರಿಕೆಗಾಗಿ ತಾಲೂಕಿನ ಪ್ರಮುಖ ನಗರ, ಪೇಟೆಗಳಲ್ಲಿ ಸ್ವಚ್ಛತೆ ಹಾಗೂ ಶುಚಿತ್ವವನ್ನು ಕಾಪಾಡುವ ನಿಟ್ಟಿನಲ್ಲಿ ಸೋಮವಾರ ಸ್ಯಾನಿಟೈಸರ್ ಸಿಂಪಡಿಸಲಾಯಿತು.
ಕಲ್ಲೇರಿ ಯುವಕನಿಗೆ ಕೊರೊನಾ ಪಾಸಿಟಿವ್ ವರದಿಯಾಗುತ್ತಲೆ ತಾಲೂಕಿನಲ್ಲಿ ಕೊರೊನಾ ಸಂಪೂರ್ಣ ನಿರ್ಮೂಲನೆಗೊಳಿಸುವ ನಿಟ್ಟಿನಲ್ಲಿ ಶಾಸಕ ಹರೀಶ್ ಪೂಂಜ ಮನವಿ ಮೇರೆಗೆ ಬದುಕು ಕಟ್ಟೋಣ ತಂಡ ಸಹಯೋಗದಲ್ಲಿ ತಾಲೂಕಿನ ಪ್ರಮುಖ ಪೇಟೆ ಹಾಗೂ ಆಯಕಟ್ಟಿನ ಪ್ರದೇಶಗಳಲ್ಲಿ ಸೋಮವಾರ 12,000 ಲೀ. ಸ್ಯಾನಿಟೈಸರ್ ಸಿದ್ಧಪಡಿಸಿ ಸಿಂಪಡಿಸಿದರು.
ಸೋಮವಾರ ಉಜಿರೆ ಸಂಧ್ಯಾ ಟ್ರೇಡರ್ಸ್ನ ಅರ್ಚನಾ ರಾಜೇಶ್ ಪೈ ಅವರು ಸಿದ್ದಪಡಿಸಿದ ಮೊಗ್ರೋಡಿ ಕನ್ಸ್ಟ್ರಕ್ಷನ್ ನೀಡಿದ ಟ್ಯಾಂಕರ್ನಲ್ಲಿ ತುಂಬಿಸಿ, ಉಜಿರೆ ಬಸ್ ನಿಲ್ದಾಣದಿಂದಲೇ ಸಿಂಪಡಣೆ ಆರಂಭಿಸಲಾಯಿತು. ಸ್ವತಃ ಶಾಸಕ ಹರೀಶ್ ಪೂಂಜ ಅವರೂ ಕೂಡಾ ತಂಡದ ಜತೆ ಸೇರಿಕೊಂಡು ದ್ರಾವಣದ ಸಿಂಪಡಣೆಯನ್ನು ಮಾಡಿದರು. ಉಜಿರೆ ಬಸ್ನಿಲ್ದಾಣ, ಇಲ್ಲಿನ ಪೇಟೆಯ ಸುತ್ತಮುತ್ತ, ಬೆಳ್ತಂಗಡಿ ನಗರ, ಸಂತೆಕಟ್ಟೆ, ಗುರುವಾಯನಕೆರೆ ಸೇರಿದಂತೆ ಜನಸಂದಣಿ ಹೆಚ್ಚಾಗಿ ಓಡಾಡುವ ಮಾರುಕಟ್ಟೆ ಸ್ಥಳಗಳಲ್ಲಿ ಸ್ಯಾಟನಿಟರಿ ಸಿಂಪಡಿಸಲಾಯಿತು.
ಬೆಳ್ತಂಗಡಿ ತಾಲೂಕಿನಲ್ಲಿ ಪ್ರಕೃತಿ ವಿಕೋಪ ಸಂದರ್ಭ ಚಾರ್ಮಾಡಿ ಪ್ರದೇಶದಲ್ಲಿ ಸಾವಿರಾರು ಯುವಕರ ತಂಡವನ್ನು ಕಟ್ಟಿಕೊಂಡು ಪುನರ್ ಅಭಿವೃದ್ದಿಗಾಗಿ ದುಡಿದ ಬದುಕು ಕಟ್ಟೋಣ ಬನ್ನಿ ತಂಡದ ಉದ್ಯಮಿಗಳಾದ ರಾಜೇಶ್ ಪೈ ಹಾಗೂ ಮೋಹನ್ ಕುಮಾರ್ ಉಜಿರೆ ಅವರು ಕೈ ಜೋಡಿಸಿದರು.