ಸುಪ್ರೀತಾ ಸಾಲ್ಯಾನ್, ಪಡು
ಎಳೆಯ ವಯಸ್ಸಿನಲ್ಲಿಯೇ ರಂಗಭೂಮಿಗೆ ಎಂಟ್ರಿ ನೀಡಿದ ಈ ಕಲಾವಿದ ಇಂದು ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಾಮಿಡಿ ಕಿಲಾಡಿಗಳು ಸೀಸನ್ 3 ವೇದಿಕೆಯಲ್ಲಿ ಮಂಗಳೂರಿನ ಕಿಲಾಡಿಯಾಗಿ ಸದ್ದು ಮಾಡುತ್ತಿದ್ದಾನೆ. ರಂಗಭೂಮಿಯಲ್ಲಿ ಹಾಸ್ಯ ಅಭಿಮಾನಿಗಳಿಗೆ ರಸ ಉಣಿಸಿದ ಕೀರ್ತಿ ಕರಾವಳಿಯಲ್ಲಿ ಬೆಳೆದು ಬಂದ ಈ ಎಳೆಯ ಪ್ರತಿಭೆಗೂ ಸಲ್ಲುತ್ತದೆ. ವೇದಿಕೆಯಲ್ಲಿ ನಟನೆಯ ಮೂಲಕ ತನ್ನದೇ ಆದ ರೀತಿಯಲ್ಲಿ ಛಾಪು ಮೂಡಿಸಿ ಸದ್ದಿಲ್ಲದೆ ಅಭಿಮಾನಿ ಬಳಗವನ್ನು ಸಂಪಾದಿಸುತ್ತಿರುವ ಈ ಕಲಾವಿದ ಮತ್ಯಾರು ಅಲ್ಲ. ಸೂರಜ್ ಕುಮಾರ್
ಸುರಜ್ ಮೂಲತಃ ಮಂಗಳೂರು ಸಮೀಪದ ಕಾವೂರಿನ ಸುನೀಲ್ ಕುಮಾರ್ ಮತ್ತು ರೇಖಾ ಸುವರ್ಣ ದಂಪತಿಯ ಪುತ್ರ. ವಯಸ್ಸು 19. ಆದರೂ ರಂಗಭೂಮಿಯ ಬಗೆಗೆ ಆಳವಾದ ಜ್ಞಾನ ಈ ಕಲಾವಿದನಿಗಿದೆ. ಇದಕ್ಕೆ ಕಾರಣ ಸುರಜ್ ಎಳೆಯ ವಯಸ್ಸಿನಲ್ಲಿಯೇ ಕಲಾ ಭಾರ್ಗವ ಎಂಬ ಬಿರುದನ್ನು ಪಡೆದುಕೊಂಡಿರುವುದು.
ನಾಟಕ, ಯಕ್ಷಗಾನ, ಸಿನಿಮಾ ಹೀಗೆ ಕಲೆಯ ಅನೇಕ ಪ್ರಕಾರಗಳಲ್ಲಿ ಗುರುತಿಸಿಕೊಂಡಿರುವ ಇವರು 7 ನೇ ತರಗತಿಯಲ್ಲಿರುವಾಗಲೇ ಗುರುಗಳಾದ ರಾಮಚಂದ್ರ ಭಟ್ ಅವರಿಂದ ಧೀಂಕಿಟದ ದೀಕ್ಷೆ ಪಡೆದು ಯಕ್ಷರಂಗದಲ್ಲಿ ಹಾಸ್ಯ ಉಣಬಡಿಸಿ ಮಿಂಚಿದವರಾಗಿದ್ದಾರೆ. ಶ್ರೀ ಕೃಷ್ಣ ಲೀಲೆ, ಯೋಗಿಣಿ ಕಲ್ಯಾಣ ಸೇರಿದಂತೆ 5 ಕ್ಕೂ ಮಿಕ್ಕಿ ಪ್ರಸಂಗಗಳಲ್ಲಿ ಬಣ್ಣ ಹಚ್ಚಿರುವ ಇವರು ಯಕ್ಷರಂಗದಲ್ಲಿ 70 ಕ್ಕೂ ಮಿಕ್ಕಿ ಪ್ರದರ್ಶನ ನೀಡಿದ್ದಾರೆ.
ಇನ್ನು ರಂಗಭೂಮಿಯಲ್ಲೂ ಸೂರಜ್ ಅವರದು ಎತ್ತಿದ ಕೈ. ಯಾವುದೇ ಪಾತ್ರ ಸಿಗಲಿ ಅದನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಇವರು ಹಾಸ್ಯ ಹಾಗೂ ಅನೇಕ ಪೋಷಕ ಪಾತ್ರಗಳಲ್ಲಿ ಗಮನ ಸೆಳೆದಿದ್ದಾರೆ. ಚಿಕ್ಕಂದಿನಿಂದಲೂ ರಂಗಭೂಮಿಯ ಹವ್ಯಾಸ ಇಟ್ಟುಕೊಂಡು ಸ್ವಂತ ಪರಿಶ್ರಮದಿಂದ ಪಾತ್ರಗಳನ್ನು ನಿರ್ವಹಿಸುತ್ತಿದ್ದ ಇವರಿಗೆ ತನ್ನ 16 ನೇ ವಯಸ್ಸಿನಲ್ಲಿ ಗುರುಗಳಾಗಿ ಸಿಕ್ಕಿದ್ದು ದಿನಕರ್ ಕರ್ಕೇರಾ ಫರಂಗಿಪೇಟೆ. ಇವರಿಂದ ದೊರೆತ ಅವಕಾಶಗಳು ಸೂರಜ್ ಅವರ ಕಲಾ ಜೀವನಕ್ಕೆ ಒಂದೊಳ್ಳೆಯ ಅಡಿಪಾಯವನ್ನು ಹಾಕಿಕೊಟ್ಟಿದೆ. ನಮ್ಮ ಕಥೆ ದಾದ..? ದಿನ ದಿತಿಜಿ ಸೇರಿದಂತೆ ಅನೇಕ ತುಳು, ಕನ್ನಡ ನಾಟಕಗಳಲ್ಲಿ ನಟಿಸಿರುವ ಇವರು ನರ್ಸ್ ಪಾತ್ರದಲ್ಲಿ ಅತ್ಯುತ್ತಮ ಅಭಿನಯದಿಂದ ಪ್ರೇಕ್ಷಕರನ್ನು ಬಿದ್ದು ಬಿದ್ದು ನಗಿಸಿ ಅನೇಕ ಕಲಾಭಿಮಾನಿಗಳ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದ್ದಾರೆ.
ಇಷ್ಟೇ ಅಲ್ಲದೆ ಕರಾವಳಿಗರ ಮನಗೆದ್ದ ಬಲೆ ತೆಲಿಪಾಲೆ ರಿಯಾಲಿಟಿ ಶೋನಲ್ಲಿಯೂ ಅದ್ಭುತವಾಗಿ ಅಭಿನಯಿಸಿ ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ. ಬಲೆ ತೆಲಿಪಾಲೆ ಸೀಸನ್ 3 ಯಲ್ಲಿ ಫೈನಲ್ ಪ್ರವೇಶಿಸಿರುವ ಸೂರಜ್ ಅದ್ಭುತ ನಟನೆಯ ಮೂಲಕ ನೋಡುಗರನ್ನು ನಗೆಗಡಲಲ್ಲಿ ತೇಲಿಸಿದ್ದಾರೆ.
ಸಿನಿಮಾ ಕ್ಷೇತ್ರದಲ್ಲಿಯೂ ಪ್ರಯಾಣ ಬೆಳೆಸಿರುವ ಇವರು ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದ ಕಡಲಮಗೆ ಚಿತ್ರದಲ್ಲಿ ನಟಿಸಿದ್ದು, ದುಬೈನಲ್ಲೂ ತನ್ನ ಪ್ರತಿಭಾ ಕಂಪು ಸೂಸಿದ್ದಾರೆ. ತುಳುವಿನ ಪತ್ತನಾಜೆ, ಅರೆಮರ್ಲೆರ್ ಚಿತ್ರದಲ್ಲಿ ಅಭಿನಯಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಇನ್ನು ಇವರು ನಟಿಸಿರುವ ಅಮ್ಮೆರ್ ಪೊಲೀಸಾ, ಉಮಿಲ್, ಕಟಪಾಡಿ ಕಟ್ಟಪ್ಪೆ ಚಿತ್ರ ಮುಂಬರುವ ದಿನಗಳಲ್ಲಿ ತೆರೆ ಕಾಣಲಿದೆ.
ಕಲಾ ಕ್ಷೇತ್ರದಲ್ಲಿ ಸೂರಜ್ ಮಾಡಿರುವ ಈ ಎಲ್ಲಾ ಸಾಧನೆಗಳಿಗೆ ರಂಗಭೂಮಿಯ ಹಿರಿಯ ಕಲಾವಿದ ಜಿ.ಎ ಬೋಳೂರು ಅವರಿಂದ ಕಲಾ ಭಾರ್ಗವನೆಂಬ ಬಿರುದು ಒಲಿದು ಬಂದಿದೆ. ಮಾತ್ರವಲ್ಲದೇ, ಇದೀಗ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನ ಮೆಚ್ಚಿದ ರಿಯಾಲಿಟಿ ಶೋ ಕಾಮಿಡಿ ಕಿಲಾಡಿಗಳು – 3 ಯಲ್ಲಿ ಅದ್ಬುತವಾಗಿ ನಟಿಸುತ್ತಿದ್ದು ಕರಾವಳಿ ಮಾತ್ರವಲ್ಲ ಕರ್ನಾಟಕದಲ್ಲೂ ಸದ್ದು ಮಾಡುತ್ತಿದ್ದಾರೆ. ಕಲಾ ಕ್ಷೇತ್ರದ ತನ್ನೆಲ್ಲಾ ಸಾಧನೆಗಳಿಗೆ ರಂಗಭೂಮಿಯ ಕಲಾವಿದರ ಜೊತೆಗೆ ತಂದೆ ತಾಯಿಯ ಆಶೀರ್ವಾದವೇ ಕಾರಣವೆನ್ನುತ್ತಾರೆ ಸೂರಜ್ ಕುಮಾರ್.