ಮಂಗಳೂರು, ಮಾ.30 (DaijiworldNews/PY) : ಸಂಪೂರ್ಣ ಲಾಕ್ಡೌನ್ ಹಿನ್ನೆಲೆ ಸಾರ್ವಜನಿಕರಿಗೆ ಅಗತ್ಯ ವಸ್ತುಗಳನ್ನು ಪೂರೈಸುವ ಸಲುವಾಗಿ ದಿನಸಿ ವಸ್ತುಗಳ ಸಂಗ್ರಹಣಾ ಕೇಂದ್ರವನ್ನು ಮಂಗಳೂರು ಮಹಾನಗರ ಪಾಲಿಕೆಯಲ್ಲಿ ತೆರೆಯಲಾಗಿದೆ.
ಜಿಲ್ಲೆಯನ್ನು ಕೊರೊನಾ ಸೋಂಕು ವ್ಯಾಪಿಸದಂತೆ ಮಂಜಾಗ್ರತಾ ಕ್ರಮವಾಗಿ ಮೂರ ದಿನಗಳ ಕಾಲ ಸಂಪೂರ್ಣ ಬಂದ್ ಮಾಡಲಾಗಿದ್ದು, ಈ ಹಿನ್ನೆಲೆ ಜನರಿಗೆ ತೊಂದರೆಯಾಗದಂತೆ ಪಾಲಿಕೆಯಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರನ್ನು ಈ ಸಂಗ್ರಹಣಾ ಕೇಂದ್ರಕ್ಕೆ ನೋಡಲ್ ಅಧಿಕಾರಿಯಾಗಿ ನಿಯೋಜಿಸಲಾಗಿದೆ. ಈ ವಿಚಾರವಾಗಿ ಯಾವುದೃ ಸಂದೇಹವಿದ್ದಲ್ಲಿ 1077 ಸಂಖ್ಯೆಗೆ ಕರೆ ಮಾಡಬಹುದು.
ಜಿಲ್ಲಾಡಳಿತದ ವತಿಯಿಂದ ತೆರೆಯಲಾಗಿರುವ ಸಂಗ್ರಹಣಾ ಕೇಂದ್ರದಲ್ಲಿ ದಿನಸಿ ಸಾಮಗ್ರಿಗಳನ್ನು ದಾನ ಮಾಡಲು ಬಯಸುವವರು ದವಸ ಧಾನ್ಯಗಳು, ತೊಗರಿ ಬೇಳೆ, ಸನ್ ಫ್ಲವರ್ ಆಯಿಲ್, ಅಕ್ಕಿ, ಗರಂ ಮಸಾಲೆ, ಉಪ್ಪಿನಕಾಯಿ, ಸಾಂಬಾರ ಪದಾರ್ಥಗಳ ಪ್ಯಾಕ್, ದೀರ್ಘಕಾಲ ಬಾಳಿಕೆ ಬರುವ ತರಕಾರಿಗಳನ್ನು ನೀಡಬಹುದಾಗಿದೆ ಎಂದು ಜಿಲ್ಲಾಧಿಕಾರಿಯವರ ಪ್ರಕಟಣೆಯಲ್ಲಿ ತಿಳಿಸಲಾಗಿತ್ತು.
ಬೆಂಗಳೂರಿನ ಸಾಫ್ಟ್ವೇರ್ ಉದ್ಯೋಗಿಯೊಬ್ಬರು ಇಂದು ಮೊದಲ ದಾನವಾಗಿ 5 ಕ್ವಿಂಟಾಲ್ ಅಕ್ಕಿಯನ್ನು ನೀಡಿದ್ದಾರೆ. ಈ ಬಗ್ಗೆ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಅಜಿತ್ ಕುಮಾರ್ ಹೆಗ್ಡೆಯವರು ಈ ವಿಚಾರವಾಗಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.