ಉಡುಪಿ, ಮಾ 30 (DaijiworldNews/SM): ಕಳೆದ ಒಂದುವಾರದಿಂದ ಮದ್ಯ ಸಿಗದೆ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಜಿಲ್ಲೆಯಲ್ಲಿ ಕಳೆದ ಐದು ದಿನಗಳಲ್ಲಿ ಆರು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮದ್ಯ ದೊರೆಯದ ಕಾರಣದಿಂದಾಗಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ನಾಗೇಶ್ ಆಚಾರ್ಯ(37), ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ಶಶಿಧರ ಸುವರ್ಣ(46), ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ಳಂಪಳ್ಳಿ ಗ್ರಾಮದ ಕುಕ್ಕಿಕ್ಕಟ್ಟೆಯ ವಾಲ್ಟರ್ ಡಿಸೋಜ (57), ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಹೆಮ್ಮಾಡಿ ಗ್ರಾಮದ ಸಂತೋಷ ನಗರದ ರಾಘವೇಂದ್ರ (37),ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ಉದ್ಯಾವರ ಬೋಳಾರ್ಗುಡ್ಡೆಯ ಗಣೇಶ (42) ಎಂಬವರು ಮದ್ಯ ಸಿಗದೆ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಮುನಿಯಾಲು ಗಾಂಧಿನಗರದ ಅರವಿಂದ(37) ಎಂಬವರು ಮೃತಪಟ್ಟಿದ್ದಾರೆ.
ಇನ್ನು ಕೊರೊನಾ ಮಹಾಮಾರಿ ತೀವ್ರವಾಗಿ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಯಂತ್ರಿಸುವ ನಿಟ್ಟಿನಲ್ಲಿ ಸರಕಾರಗಳು ಮದ್ಯದಂಗಡಿಗಳನ್ನು ಬಂದ್ ಮಾಡುವಂತೆ ಆದೇಶ ಮಾಡಿವೆ. ಆದರೆ, ಮದ್ಯವನ್ನೇ ನಂಬಿಕೊಂಡಿರುವವರು ಅನೇಕ ಮಂದಿ ನೊಂದುಕೊಂಡಿದ್ದಾರೆ. ಅಲ್ಲದೆ ಅನೇಕರು ಆತ್ಮಹತ್ಯೆಯ ಮೊರೆ ಕೂಡ ಹೋಗಿದ್ದಾರೆ ಎಂದು ತಿಳಿದುಬಂದಿದೆ.