ಚಂಡೀಘಢ: ಮನೆಕೆಲಸದವಳು 1 ವರ್ಷದ ಮಗುವಿನ ಮೇಲೆ ರಾಕ್ಷಸೀಪ್ರವೃತಿ ಮೆರೆದ ಘಟನೆ ಪಂಜಾಬ್ನ ಕಪುರ್ತಲಾದಲ್ಲಿ ನಡೆದಿದ್ದು, ಇದೀಗ ಈ ರಾಕ್ಷಸಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಮಗುವಿನ ಹೆತ್ತವರಿಬ್ಬರೂ ಕೆಲಸಕ್ಕೆ ಹೋಗುತ್ತಿದ್ದ ಕಾರಣ ಮಗುವನ್ನ ನೋಡಿಕೊಳ್ಳಲು ಕೆಲಸದಾಕೆ ಪರ್ವೀನ್ಳನ್ನ ನೇಮಿಸಿದ್ದರು. ಆದರೆ ಆಕೆ ತಂದೆ ತಾಯಿ ಸಮ್ಮುಖದಲ್ಲಿ ಮುದ್ದು ಮಾಡುತ್ತಿದ್ದು ಅವರು ಕೆಲಸದ ಕಡೆ ತೆರಳುತ್ತಿದ್ದಂತೆ ಪರ್ವೀನ್ ತನ್ನ ಮೃಗೀಯ ಮುಖವಾಡ ಕಳಚುತ್ತಿದ್ದಳು. 1 ವರ್ಷದ ಪುಟ್ಟ ಮಗುವನ್ನು ಅಮಾನುಷವಾಗಿ ಥಳಿಸಿ, ಕೋಲಿನಿಂದ ಮಗುವಿಗೆ ಹೊಡೆದು, ಮಗುವಿನ ಕೆನ್ನೆಯನ್ನ ಕಚ್ಚಿದ್ದಾಳೆ. ಅಲ್ಲದೆ ಮಗುವಿನ ಕಾಲರ್ ಹಿಡಿದು ಮೇಲೆತ್ತಿದ್ದಾಳೆ. ಮಗು ನೋವಿನಿಂದ ಅಳುತ್ತಿದ್ದರೂ ಕ್ರೂರಿ ಮಹಿಳೆಗೆ ಅದು ಯಾವುದೇ ಪರಿಣಾಮ ಬೀರಲಿಲ್ಲ. ಮಗು ಅಳುತ್ತಿರೋ ಧ್ವನಿ ಹೊರಗೆ ಕೇಳಿಸಬಾರದೆಂದು ಟಿವಿಯ ಶಬ್ದವನ್ನ ಹೆಚ್ಚು ಮಾಡಿದ್ದಾಳೆ. ಈ ಎಲ್ಲಾ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ವಿಡಿಯೋ ವೈರಲ್ ಆಗಿದೆ. ಮಗುವಿನಲ್ಲಿ ಆಗುತ್ತಿರುವ ಗಾಯದ ಗುರುತು ಹಾಗೂ ಮಗುವಿನ ವರ್ತನೆಯಲ್ಲಿ ಬದಲಾವಣೆ ಕಂಡುಬಂದಾಗ ಗೌಪ್ಯವಾಗಿ ಮನೆಯ ಮೂಲೆಯೊಂದರಲ್ಲಿ ಮೊಬೈಲ್ ಫೋನ್ ಕ್ಯಾಮೆರಾ ಆನ್ ಮಾಡಿ ಇಟ್ಟಿದ್ದರು. ಆಗ ಪರ್ವೀನ್ಳ ಕೃತ್ಯ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಮಗುವಿನ ತಂದೆ ಸುಖ್ದೇವ್ ಸಿಂಗ್ ನೀಡಿದ ದೂರಿನನ್ವಯ ಇದೀಗ ಪೊಲೀಸರು ಆರೋಪಿ ಮಹಿಳೆಯನ್ನ ಬಂಧಿಸಿದ್ದಾರೆ. ಬಂಧಿತಳನ್ನು ಪರ್ವೀನ್(35) ಎಂದು ಗುರುತಿಸಲಾಗಿದ್ದು, ಈಕೆ ಕಪುರ್ತಲಾದ ಮೆಹ್ಟಾಬ್ಘರ್ ನಿವಾಸಿಯಾಗಿದ್ದಾಳೆ. ಆರೋಪಿ ಪರ್ವೀನ್ ವಿರುದ್ಧ ಐಪಿಸಿ ಸೆಕ್ಷನ್ 323 ಹಾಗೂ 380ರಡಿ ಪ್ರಕರಣ ದಾಖಲಾಗಿದೆ.