ಮಂಗಳೂರು, ಮಾ.31(DaijiworldNews/PY) : ಕಳೆದ ಮೂರು ದಿನಗಳಿಂದ ಸಂಪೂರ್ಣ ಲಾಕ್ಡೌನ್ ಆದ ಹಿನ್ನೆಲೆ ಮನೆಯಿಂದ ಯಾರೂ ಹೊರ ಬಂದಿರಲಿಲ್ಲ. ಆದರೆ, ಮಂಗಳವಾರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದ ಹಿನ್ನೆಲೆ ಬೆಳ್ಳಂಬೆಳಗ್ಗೆ ಮನೆಯಿಂದ ಹೊರಬಂದ ಭಾರಿ ಸಂಖ್ಯೆಯ ಜನರು ಕ್ಯೂನಲ್ಲಿ ನಿಂತು ಖರೀದಿಗೆ ಮುಂದಾಗಿದ್ದಾರೆ.
ಮಂಗಳೂರಿನ ಕದ್ರಿ ಬಳಿಯಿರುವ ಮಲ್ಲಿಕಟ್ಟೆ ಮಾರ್ಕೆಟ್ನಲ್ಲಿ ಭಾರಿ ಸಂಖ್ಯೆಯ ಜನರು ದಿನಸಿ, ತರಕಾರಿ ಅಂಗಡಿಗಳ ಮುಂದೆ ಕುರ್ಚಿ ಹಾಕಿಕೊಂಡು ಕ್ಯೂನಲ್ಲಿ ನಿಂತು ಖರೀದಿಗೆ ಮುಂದಾಗಿದ್ದಾರೆ. ಅಲ್ಲದೇ ಭಾರಿ ಸಂಖ್ಯೆಯ ವಾಹನ ದಟ್ಟಣೆಯು ಉಂಟಾಗಿದೆ.
ಅಗತ್ಯ ವಸ್ತುಗಳಾದ ದಿನಸಿ, ತರಕಾರಿ, ಪೇಪರ್ ಖರೀದಿಗೆ ಜನರು ಮುಗಿಬಿದ್ದಿದ್ದಾರೆ.
ಇದರೊಂದಿಗೆ ಚಿಕನ್, ಮಟನ್ ಖರೀದಿಗೆ ಜನರು ಮುಗಿಬಿದ್ದಿದ್ದು, ಕಳೆದ ಮೂರು ದಿನಗಳಿಂದ ಮಾಂಸ ಸಿಗದೇ ಇದ್ದ ಕಾರಣ ಮಾಂಸ ಖರೀದಿಗೆ ಜನರು ಮುಂದಾಗಿದ್ದಾರೆ. ಮೀನುಗಾರಿಗೆ ಬಂದ್ ಆದ ಕಾರಣ ಜನರು ಚಿಕನ್, ಮಟನ್ ಖರೀದಿಗೆ ಮೊರೆ ಹೋಗಿದ್ದಾರೆ.
ಇಷ್ಟೆಲ್ಲಾ ಆದರೂ ಜನರಿಗೆ ಅನುಕೂಲ ಮಾಡಿಕೊಡುವುದರಲ್ಲಿ ಮಂಗಳೂರು ಮಹಾನಗರ ಪಾಲಿಕೆ ಯಡವಟ್ಟು ಮಾಡಿದೆ. ಮಾರುಕಟ್ಟೆ ಬಳಿ ಕ್ಯೂಗಾಗಿ ಚೇರ್ ವ್ಯವಸ್ಥೆ ಮಾಡಲಾಗಿತ್ತು. ಎಲ್ಲಾ ಚೇರ್ಗಳ ಮೇಲೆ ಕುಳಿತು ತಮ್ಮ ಸರದಿ ಬಂದಾಗ ವಸ್ತುಗಳನ್ನು ಖರೀದಿಸಿ ಜನರು ಮುಂದೆ ಸಾಗುತ್ತಿದ್ದು, ಆದರೆ, ಇದೀಗ ಒಂದೇ ಚೇರ್ಗಳನ್ನು ಎಲ್ಲರು ಬಳಸುವ ಕಾರಣ ಸೋಂಕು ಬರಬಹುದು ಎಂಬುದು ಜನರ ಆಕ್ಷೇಪವಾಗಿದೆ. ಹಾಗಾಗಿ ಜನರು ಚೇರ್ನಲ್ಲಿ ಕೂರದೆ ಪಕ್ಕದ ಸಾಲಿನಲ್ಲಿ ನಿಂತು ವಸ್ತುಗಳನ್ನು ಖರೀದಿ ಮಾಡಿದ್ದಾರೆ.