ಮಂಗಳೂರು, ಏ 01 (Daijiworld News/MSP): ಮಂಗಳೂರಿನಲ್ಲಿ ಕೊರೊನಾ ಸಹಿತ ವೈರಾಣು ಪತ್ತೆ ಪ್ರಯೋಗಾಲಯ ಆರಂಭಕ್ಕೆ ಮಂಜೂರಾತಿ ಸಿಕ್ಕಿದ್ದು, ವೆನ್ಲಾಕ್ ಆಸ್ಪತೆಯಲ್ಲಿ ತೆರೆಯಲಾಗುವುದು . ವಿಶೇಷ ಎಂದರೆ ಇಂದಿನಿಂದಲೇ (ಏ.೧) ಇದರ ಪ್ರಯೋಗಿಕ ಪರೀಕ್ಷೆ ಆರಂಭವಾಗಲಿದೆ. ಮಂಗಳೂರಿನಲ್ಲಿ ಪೂರ್ಣ ಪ್ರಮಾಣದ ಪ್ರಯೋಗಾಲಯ ಆರಂಭವಾದ ಅನಂತರ ಗಂಟಲು ಸ್ರಾವ ಮಾದರಿ ಪರೀಕ್ಷಾ ವರದಿಯನ್ನು ಒಂದೇ ದಿನದಲ್ಲಿ ಪಡೆಯಬಹುದಾಗಿದೆ. ಈವರೆಗೆ ವ್ಯಕ್ತಿಯಲ್ಲಿ ಕೊರೊನಾ ಇದೆಯೋ ಇಲ್ಲವೋ ಎಂದು ದೃಢಪಡಿಸಲು ನಾಲ್ಕೈದು ದಿನ ಕಾಯಬೇಕಿತ್ತು.
ರಾಜ್ಯದಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿರುವುದರಿಂದ ಎಲ್ಲಾ ಜಿಲ್ಲೆಗಳಲ್ಲೂ ಟೆಸ್ಟಿಂಗ್ ಲ್ಯಾಬ್ ತೆರೆಯುವ ಬಗ್ಗೆ ಆರೋಗ್ಯ ಸಚಿವ ಶ್ರೀರಾಮುಲು ಈ ಹಿಂದೆ ಮಂಗಳೂರಿಗೆ ಭೇಟಿ ನೀಡಿದ್ದಾಗ ಹೇಳಿದ್ದರು. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇರುವುದರಿಂದ ವಿದೇಶದಲ್ಲಿರುವವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ಮತ್ತು ಶಂಕಿತ ಕೊರೊನಾ ಪ್ರಕರಣ ಹೆಚ್ಚುತ್ತಿರುವುದರಿಂದ ಟೆಸ್ಟಿಂಗ್ ಲ್ಯಾಬ್ ಅಗತ್ಯತೆ ಹೆಚ್ಚಿತ್ತು.
ಲ್ಯಾಬ್ ನಲ್ಲಿ ಕರ್ತವ್ಯ ನಿರ್ವಹಿಸಲು ಡಾ| ಶರತ್ ಕುಮಾರ್ , ಡಾ| ಮಧುಸೂದನ್ ಅವರೊಂದಿಗೆ ಇತರ ಮೂವರು ಸಿಬ್ಬಂದಿಗಳು ಸೇರಿ ಐವರ ತಂಡವಿದೆ. ಇವರಷ್ಟೇ ಅಲ್ಲದೆ ಎನ್ ಐ ಟಿಕೆ ಸುರತ್ಕಲ್, ಮೀನುಗಾರಿಕಾ ಕಾಲೇಜು ಮತ್ತು ಮಂಗಳೂರು ವಿವಿಯ ನುರಿತ ವಿಜ್ಞಾನಿಗಳು ಸಹಕಾರ ನೀಡುತ್ತಿದ್ದಾರೆ.ಪ್ರಯೋಗಾಲಕ್ಕೆ ಬೇಕಾದ ಯಂತ್ರಗಳು ಸೇರಿದಂತೆ ವಿವಿಧ ಪ್ರಕ್ರಿಯೆಗಳಿಗೆ 60 ಲಕ್ಶ ರೂ. ವೆಚ್ಚವಾಗಿದೆ . ಇದರ ಕೆಲವು ಮೂಲ ಆವಶ್ಯಕತೆಗಳಿಗೆ ಹೆಚ್ಚುವರಿ ಹಣ ತಗಲಿದೆ ಎಂದು ಆಸ್ಪತ್ರೆಯ ವೈದ್ಯಾಧಿಕಾರಿಯೊಬ್ಬರು ತಿಳಿಸಿದ್ದಾರೆ.