ಸುಳ್ಯ, ಏ 01 (Daijiworld News/MSP): ವಿದೇಶದಿಂದ ಬಂದ ವ್ಯಕ್ತಿಯೊಬ್ಬರನ್ನು ಹೋಂ ಕ್ವಾರಂಟೈನ್ ನಲ್ಲಿರಲು ಸೂಚಿಸಿದ್ರೂ, ಆ ವ್ಯಕ್ತಿ ಮನೆಯಲ್ಲೇ ಇರದೆ, ಸುತ್ತಾಡುತ್ತಿದ್ದ ಘಟನೆ ಸವಣೂರು ಗ್ರಾ.ಪಂ. ವ್ಯಾಪ್ತಿಯ ಆರೇಲ್ತಡಿಯಲದಲ್ಲಿ ನಡೆದಿದೆ.
ಇದೀಗ ಆ ವ್ಯಕ್ತಿಯ ವಿರುದ್ಧ ಸುಳ್ಯ ತಾಲೂಕಿನ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಈ ವ್ಯಕ್ತಿ ಕೆಲ ದಿನಗಳ ಹಿಂದೆ ವಿದೇಶದಿಂದ ಆಗಮಿಸಿದ್ದು, 14 ದಿನಗಳ ಕಾಲ ಹೋಂ ಕ್ವಾರಂಟೈನ್ ನಲ್ಲಿರುವಂತೆ ಈತನಿಗೆ ಸೂಚಿಸಲಾಗಿತ್ತು, ಅಲ್ಲದೆ ಜಿಲ್ಲಾಡಳಿತ ಕೂಡ ಪಟ್ಟಿ ಬಿಡುಗಡೆ ಮಾಡಿತ್ತು. ಅದರಂತೆ ಮಾ.30ರಂದು ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ಗ್ರಾ.ಪಂ ನ ತಂಡ ಭೇಟಿ ನೀಡಿದ ವೇಳೆ ಆ ವ್ಯಕ್ತಿ ಮನೆಯಲ್ಲಿ ಇಲ್ಲದೇ ಇರುವುದು ಗೊತ್ತಾಗಿದೆ. ಈ ಕುರಿತು ಮನೆಯವರಲ್ಲಿ ವಿಚಾರಿಸಿದಾಗ ಈತ ಮನೆಯಿಂದ ಹೊರ ಹೋಗಿರುವ ಬಗ್ಗೆ ಮಾಹಿತಿ ನೀಡಿದ್ದು, ಬಳಿಕ ಆ ವ್ಯಕ್ತಿಯನ್ನು ಮನೆಗೆ ಬರುವಂತೆ ಸೂಚಿಸಲಾಗಿದೆ. ಬಳಿಕ ಆ ವ್ಯಕ್ತಿಗೆ ಮನೆಯಲ್ಲಿರುವಂತೆ ತಿಳಿಸಲಾಯಿತು.
ಈ ವೇಳೆ ಅಧಿಕಾರಿಗಳೊಂದಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ವ್ಯಕ್ತಿ ದುರ್ವತನೆ ತೋರಿಸಿದ್ದರೆನ್ನಲಾಗಿದೆ. ಈ ಕಾರಣದಿಂದ ಸರ್ಕಾರದ ಸೂಚನೆ ಧಿಕ್ಕರಿಸಿದಕ್ಕಾಗಿ ಆತನ ಮೇಲೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.