ಉಡುಪಿ,ಏ 01 (Daijiworld News/MSP): ಕೋವಿಡ್-19 (ಕೊರೊನಾ ವೈರಸ್)ಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಜಿಲ್ಲಾ ವ್ಯಾಪ್ತಿಯಲ್ಲಿ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ನಿರ್ಬಂಧ ವಿಧಿಸಿ ಆದೇಶವನ್ನು ಹೊರಡಿಸಲಾಗಿದೆ. ಹಾಗೂ ಜಿಲ್ಲಾದ್ಯಂತ ನಾಗರಿಕರ ಸಂಚಾರವನ್ನು ನಿಷೇಧಿಸಲಾಗಿದ್ದು, ಕೆಲವೊಂದು ವಲಸೆ ಕಾರ್ಮಿಕರ/ಕೂಲಿ ಕಾರ್ಮಿಕರ ವಾಸ್ತವ್ಯಕ್ಕಾಗಿ ತಾತ್ಕಾಲಿಕ ಶೆಲ್ಟರ್ ರೂಂಗಳನ್ನು ತಾಲೂಕು ಕೇಂದ್ರಗಳಲ್ಲಿ ಸ್ಥಾಪಿಸಲಾಗಿದೆ.
ಮುಂದುವರೆದು, ಪ್ರಸ್ತುತ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಜಿಲ್ಲಾದ್ಯಂತ ನಾಗರಿಕರಿಗೆ ದಿನಬಳಕೆಯ ವಸ್ತುಗಳನ್ನು ಪಡೆಯುವಲ್ಲಿ ತೊಂದರೆ ಆಗುತ್ತಿರುವ ಕುರಿತು ಕೆಲವೊಂದು ಸಂಘ ಸಂಸ್ಥೆಗಳು/ ವ್ಯಕ್ತಿಗಳು ಸ್ವ ಇಚ್ಛೆಯಿಂದ ಜಿಲ್ಲಾಡಳಿತಕ್ಕೆ ದೈನಂದಿನ ದಿನಸಿ ಸಾಮಾಗ್ರಿಗಳನ್ನು ನೀಡಲು ಜಿಲ್ಲಾ ಕಛೇರಿಗೆ ಆಗಮಿಸುತ್ತಿದ್ದು, ಈ ರೀತಿ ಸ್ವ ಇಚ್ಛೆಯಿಂದ ದೈನಂದಿನ ದಿನಸಿ ಸಾಮಾಗ್ರಿಗಳನ್ನು ನೀಡುತ್ತಿದ್ದಾರೆ.
ಈ ದೈನಂದಿನ ದಿನಸಿ ಸಾಮಾಗ್ರಿಗಳನ್ನು ಎಲ್ಲಿ ನೀಡಬೇಕು ಎಂಬ ಬಗ್ಗೆ ಸಾರ್ವಜನಿಕರಲ್ಲಿ ಅನೇಕ ಗೊಂದಲಗಳಿರುತ್ತದೆ. ಸದ್ರಿ ಸಾಮಾಗ್ರಿಗಳನ್ನು ಜಿಲ್ಲಾ ಕೇಂದ್ರಗಳಲ್ಲಿ ಪಡೆದಲ್ಲಿ ಸಾಮಾಗ್ರಿಗಳು ಒಂದೇ ಕಡೆಯಲ್ಲಿ ಶೇಖರಣೆ ಆಗುವ ಸಂಭವವಿರುತ್ತದೆ. ಈ ವ್ಯವಸ್ಥೆಯಲ್ಲಿ ಏಕರೂಪತೆಯನ್ನು ಕಾಯ್ದುಕೊಳ್ಳಬೇಕಾಗಿರುವುದರಿಂದ ಹಾಗೂ ಕ್ಲಪ್ತ ಸಮಯದಲ್ಲಿ ಅಗತ್ಯವಿರುವ ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳನ್ನು ತಲುಪಿಸಲು ಹಾಗೂ ಈ ವ್ಯವಸ್ಥೆ ದುರುಪಯೋಗವಾಗದಂತೆ ಕ್ರಮ ವಹಿಸಬೇಕಾದ ಅವಶ್ಯಕತೆ ಇದೆ.
ಆದುದರಿಂದ ಆಹಾರ ಧಾನ್ಯಗಳು/ಆಹಾರ ಧಾನ್ಯ ಕಿಟ್/ ದಿನ ಬಳಕೆ ಅಗತ್ಯ ವಸ್ತುಗಳನ್ನು ನೀಡಲು ಇಚ್ಛಿಸುವ ದಾನಿಗಳು/ಸಂಘ ಸಂಸ್ಥೆಗಳು/ಸಾರ್ವಜನಿಕರು ಆಯಾ ತಾಲೂಕಿನ ತಹಶೀಲ್ದಾರರಿಗೆ ಬೆಳಿಗ್ಗೆ 10.00 ಗಂಟೆಯಿಂದ ಮಧ್ಯಾಹ್ನ 1.00ಗಂಟೆಯವರೆಗೆ ಹಸ್ತಾಂತರಿಸಲು ಕೋರಲಾಗಿದೆ. ಅಲ್ಲದೇ, ಮುಖ್ಯಮಂತ್ರಿಗಳ ಪರಿಹಾರನಿಧಿ/ಪ್ರಧಾನಮಂತ್ರಿಯವರ ಪರಿಹಾರನಿಧಿಗೆ ದೇಣಿಗೆ ನೀಡಲು ಇಚ್ಛಿಸುವ ದಾನಿಗಳು/ಸಂಘ ಸಂಸ್ಥೆಗಳು/ಸಾರ್ವಜನಿಕರು ಚೆಕ್ಗಳನ್ನು ಜಿಲ್ಲಾಧಿಕಾರಿ ಕಛೇರಿಯಲ್ಲಿ ಹಸ್ತಾಂತರಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.