ಮಂಗಳೂರು, ಫೆ 27: ದಕ್ಷಿಣ ಕನ್ನಡ ಜಿಲ್ಲಾ ಆನ್ ಲೈನ್ ಟ್ಯಾಕ್ಸಿ ಡ್ರೈವರ್ಸ್ ಮತ್ತು ಓನರ್ ಅಸೋಸಿಯೇಶನ್ ಒಲಾ ಹಾಗೂ ಉಬಾರ್ ಟ್ಯಾಕ್ಸಿ ಕಂಪನಿಗಳ ಸುಳ್ಳು ಭರವಸೆಗಳ ವಿರುದ್ದ ಮುಂದಿನ ವಾರದಿಂದ ಅನಿರ್ಧಿಷ್ಷಾವಾಧಿ ಮುಷ್ಕರ ಮಾಡುವುದಾಗಿ ಘೋಷಿಸಿದೆ. ಈ ಬಗ್ಗೆ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಸಂಘದ ಅಧ್ಯಕ್ಷ ಬಿ.ಕೆ ಇಮ್ತಿಯಾಝ್," ಉಬರ್ ಮತ್ತು ಒಲಾ ಕಂಪೆನಿಗಳು ಸುಳ್ಳು ಹಾಗೂ ಆಕರ್ಷಕ ಆಫರ್ಗಳನ್ನು ನೀಡುತ್ತಾ ಟ್ಯಾಕ್ಸಿ ಅಟ್ಯಾಚ್ ಮಾಡುತ್ತಿದೆ. ನಗರದಲ್ಲಿ ಒಲಾ ಮತ್ತು ಉಬರ್ ಟ್ಯಾಕ್ಸಿ ಕಂಪೆನಿಗಳನ್ನು ನಂಬಿ ಕಳೆದ ಮೂರು ವರ್ಷಗಳಿಂದ ಆನ್ ಲೈನ್ ಟ್ಯಾಕ್ಸಿ ಸೇವೆಯಲ್ಲಿ ಸಾವಿರಾರು ರೂಪಾಯಿ ದುಡಿಮೆ ಮಾಡಬಹುದೆಂದು ವಿದ್ಯಾವಂತ ಯುವಕರನ್ನು ನಂಬಿಸಿ ಬ್ಯಾಂಕ್ ಸಾಲ ಮಾಡಿಸಿ ಕಾರು ಖರೀದಿ ಮಾಡಿಸಿದ್ದಾರೆ.ಕಂಪೆನಿಯು ಕೊಡುವ ಬಾಡಿಗೆಗಳಿಂದ ಜೀವನ ನಡೆಸಲು ಮತ್ತು ಮತ್ತು ಬ್ಯಾಂಕ್ ಸಾಲ ಪಾವತಿಸಲು ಸಾಧ್ಯವಾಗದೆ ಕಂಗಾಲಾಗಿದ್ದಾರೆ" ಎಂದರು.
ಅಲ್ಲದೆ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕಾರುಗಳಿಗೆ ದಿನಕ್ಕೆ 5-6 ಲೋಕಲ್ ಟ್ರಿಪ್ಗಳು ಮಾತ್ರ ಸಿಗುತ್ತಿದ್ದು ಚಾಲಕರು ತೊಂದರೆ ಅನುಭವಿಸುತ್ತಿದ್ದಾರೆ.ಪ್ರಸಕ್ತ ಕಂಪೆನಿ ಕೊಡುತ್ತಿರುವ ಎಂ.ಬಿ.ಜಿ ದರದಲ್ಲಿ ಕಂಪೆನಿಯು 25% ಕಮಿಷನ್ ಕಡಿತ ಮಾಡುತ್ತಿದೆ ಆದರೆ ಎಂ.ಬಿ.ಜಿ ಟ್ರಿಪ್ಗಳು ಬಾರದೆ ಇರುವಂತೆ ಕಾರುಗಳ ಸಂಖ್ಯೆ ಹೆಚ್ಚು ಮಾಡಿ ಇನ್ಸೆಂಟಿವ್ ಸಿಗದಂತೆ ತಡೆಯುವ ಸಲುವಾಗಿ ಹೊಸ ಹೊಸ ಭರವಸೆ ನೀಡಿ ಹೊಸ ಕಾರುಗಳನ್ನು ಅಟ್ಯಾಚ್ ಮಾಡಿಸುತ್ತಿದೆ.ಮತ್ತು ವಾರಕ್ಕೊಮ್ಮೆ ದರ ಪಟ್ಟಿಯನ್ನು ಬದಲಾಯಿಸುತ್ತಿದ್ದು, ಇದರಿಂದ ಕಾರು ಚಾಲಕರಿಗೆ ತೀವ್ರ ತೊಂದರೆಯಾಗುತ್ತಿದೆ,ಡಿಸೇಲ್ ಬೆಲೆ ದಿನ ದಿನಕ್ಕೆ ಏರಿಕೆಯಾಗುತ್ತಿದ್ದು, ಕಂಪೆನಿ ಬಾಡಿಗೆ ದರ ಇಳಿಸುತ್ತಿರುದರಿಂದ ಕಾರು ಚಾಲಕರು ನಷ್ಟ ಅನುಭವಿಸುತ್ತಿದ್ದಾರೆ .ಹೀಗಾಗಿ ನಮ್ಮ ಹಲವು ಬೇಡಿಕೆ ಮುಂದಿಟ್ಟುಕೊಂಡು ನ್ಯಾಯ ಸಿಗುವ ತನಕ ಮುಂದಿನ ವಾರದಿಂದ ಅನಿರ್ಧಿಷ್ಟಾವಧಿ ಮುಷ್ಕರ ನಡೆಸುತ್ತೇವೆ ಎಂದು ಹೇಳಿದರು.
ಉಳಿದಂತೆ ಪತ್ರಿಕಾಗೋಷ್ಟಿಯಲ್ಲಿ ಸಂಘದ ಅಧ್ಯಕ್ಷ ಜಗರಾಜ್ ರೈ ,ಪ್ರಧಾನ ಕಾರ್ಯದರ್ಶಿ ಸಾದಿಕ್ ಕಣ್ಣೂರು, ಜತೆ ಕಾರ್ಯದರ್ಶಿ ಕಮಲಾಕ್ಷ ಬಜಾಲ್ ,ಉಪಾಧ್ಯಕ್ಷ ಮುನ್ನಾವರ್ ಮತ್ತಿತರರು ಉಪತ್ಥಿರಿದ್ದರು.