ಮಂಗಳೂರು, ಎ.01 (DaijiworldNews/PY) : ಕೊರೊನಾ ವೈರಸ್ ಸೋಂಕು ನಿಯಂತ್ರಣ ಕಾರ್ಯದಲ್ಲಿ ಕಾರ್ಯನಿರತರಾಗಿರುವ ಮಂಗಳೂರು ನಗರದ ಪೊಲೀಸರ ಸೇವೆಗೆ, ಸ್ಪಂದಿಸಿದ ಟೀಂ ಬಿ ಹ್ಯೂಮನ್ ಮತ್ತು ಎನ್.ಎಂ.ಸಿ ಮೈದಾನ್ ಗೆಳೆಯರ ಬಳಗದ ಸೇವೆಯನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ.
ತಮ್ಮ ಮನೆ, ಸಂಸಾರ ಬಿಟ್ಟು ಹಾದಿ ಬೀದಿಯಲ್ಲಿ ಲಾಕ್ ಡೌನ್ ಅನುಷ್ಠಾನಕ್ಕೆ ಶ್ರಮಿಸುತ್ತಾ, ಕೊರೊನ ವೈರಸ್ ಹರಡದಂತೆ ಸಾಮಾಜಿಕ ಕಾಳಜಿಯನ್ನು ವಹಿಸುತ್ತಿರುವ ಮಂಗಳೂರು ನಗರ ಪೊಲೀಸರಿಗೆ ಟೀಂ ಬಿ ಹ್ಯೂಮನ್ ಮತ್ತು ಎನ್.ಎಂ.ಸಿ ಮೈದಾನ್ ಗೆಳೆಯರ ಬಳಗ ಕಳೆದೆರಡು ದಿನಗಳಿಂದ ಉಪಹಾರ ವಿತರಿಸಿದೆ.
ರಾತ್ರಿ - ಹಗಲೆನ್ನದೆ ನಮ್ಮನ್ನೆಲ್ಲ ಕಾವಲು ಕಾಯುತ್ತಿರುವ ಪೊಲೀಸರಿಗೆ ಕೃತ್ಯಜ್ಞತಾ ರೂಪವಾಗಿ ಟೀಂ ಬಿಹ್ಯೂಮನ್ ಮತ್ತು ಎನ್.ಎಂ.ಸಿ ಮೈದಾನ್ ಗೆಳೆಯರ ಬಳಗವು ಉಪಹಾರ ಒದಗಿಸಿ ತಮ್ಮ ಕೃತಜ್ಞತೆಯನ್ನು ಪೊಲೀಸರಿಗೆ ತಿಳಿಸಿತು .
ಕಳೆದ ಒಂದು ವಾರದಿಂದ ಮಂಗಳೂರಿನಲ್ಲಿ ಹಸಿದು ಇರುವ ಪ್ರತಿಯೊಬ್ಬರಿಗೂ ಆಹಾರ ವಿತರಿಸಿ ಮೆಚ್ಚುಗೆ ಪಡೆದಿದೆ. ದಕ್ಷಿಣ ಕನ್ನಡದ ಬಿಜೆಪಿ ವಕ್ತಾರರಾದ ಶಹನವಾಝ್ ಹುಸೈನ್ ಅವರ ಕರೆಗೆ ಸ್ಪಂದಿಸಿದ ಬಿ- ಹ್ಯೂಮನ್ ತಂಡ, ಬಿಹಾರದ ಕೂಲಿ ಕಾರ್ಮಿಕರಿಗೆ ನೆರವು ನೀಡಿದೆ.
ಸುಮಾರು ಇಪ್ಪತ್ತೈದು ಬಿಹಾರಿ ಕಾರ್ಮಿಕರು ಧಕ್ಕೆಯಲ್ಲಿ ದುಡಿಯುತ್ತಿದ್ದು, ಲಾಕ್ ಡೌನ್ ನಿಂದ ಕಂಗೆಟ್ಟಿದ್ದರು. ಆಹಾರವಿಲ್ಲದೆ, ಮನೆಗೂ ಹೋಗಲಾರದೆ ಸಂಕಷ್ಟದಲ್ಲಿದ್ದ ಅವರನ್ನು ಶಹನವಾಝ್ ಹುಸೈಮ್ ರವರ ಸೂಚನೆಯ ಮೇರೆಗೆ ಸುರಕ್ಷಿತರನ್ನಾಗಿಸಿದ ಸೇವಾಕಾರ್ಯಕರ್ತರು, ಅವರಿಗೆ ಬೇಕಾದ ಆಹಾರ ಮತ್ತು ಅಗತ್ಯ ಸೌಲಭ್ಯ ಒದಗಿಸಿಕೊಟ್ಟಿದೆ. ಇದೇ ರೀತಿ ಕೆಲವು ಸಂಸಾರಗಳು, ವಿಧ್ಯಾರ್ಥಿಗಳ ಕರೆಗೆ ಸ್ಪಂದಿಸಿ ಟೀಂ ಬಿ-ಹ್ಯೂಮನ್ ಮತ್ತು ಎನ್.ಎಂ.ಸಿ ಮೈದಾನ್ ತಂಡದ ಯುವಕರು ಮೂರು ಹೊತ್ತೂ ಆಹಾರ ಒದಗಿಸಿ ಕೊಟ್ಟಿದ್ದಾರೆ.
ಲಾಕ್ ಡೌನ್ ಆದ ದಿನದಿಂದಲೇ ಈ ತಂಡದ ಯುವಕರು, ಸ್ವತಹ ಅಡುಗೆ ತಯಾರಿಸಿ, ಉಪಹಾರ ಮತ್ತು ಟೀ ಮಾಡಿ, ಮಂಗಳೂರು ನಗರದ ಹಲವೆಡೆ ಹಸಿವಿನಲ್ಲಿದ್ದವರಿಗೆ ನೆರವಾಗಿದೆ. ಊರಿಗೆ ಹೋಗಲಾಗದ ಕೂಲಿ ಕಾರ್ಮಿಕರಿಗೆ, ನಿರಾಶ್ರಿತರಿಗೆ, ಬಿಕ್ಷುಕರಿಗೂ ಇವರ ಸೇವೆ ದೊರೆತಿದೆ. ಮಂಗಳೂರಿನ ಈ ಯುವಕರ ಸೇವೆಯು ಆಸ್ಪತ್ರೆಗೂ ವಿಸ್ತರಿಸಿದ್ದು, ಲೇಡಿಗೋಶನ್ ಮತ್ತು ಓಮೆಗಾ ಆಸ್ಪತ್ರೆಯಲ್ಲಿನ ರೋಗಿಗಳಿಗೂ ಇವರು ನೆರವಾಗಿದ್ದಾರೆ. ಹೊಟೇಲ್ ಮತ್ತು ಸಾರಿಗೆ ವಾಹನಗಳು ಬಂದ್ ಆಗಿದ್ದರಿಂದ, ಆಸ್ಪತ್ರೆಯಲ್ಲಿ ರೋಗಿಗಳು ಮತ್ತು ಅವರೊಂದಿಗೆ ಇರುವವರೂ ಹಸಿವಿನಿಂದ ಕಂಗೆಟ್ಟಿದ್ದರು. ಇದನ್ನು ಯಾರೋ ಕರೆ ಮಾಡಿ ಹೇಳಿದಾಗ ತಕ್ಷಣ ಸ್ಪಂದಿಸಿದ ಈ ಯುವಕರು ಅವರಿಗೂ ಮೂರು ಹೊತ್ತು ಆಹಾರದ ಸೌಲಭ್ಯ ಮಾಡಿಕೊಟ್ಟರು. ಇವರ ಈ ಮಾನವೀಯ ಸೇವೆಯು ನಿರಂತರ ಇರಲಿ ಎಂದು ನಮ್ಮ ಪ್ರಾರ್ಥನೆ.