ಕಾಸರಗೋಡು, ಏ 01 (Daijiworld News/MSP): ಕೊರೊನಾ ಪೀಡಿತ ಜಿಲ್ಲೆಯ ಆಯ್ದ ಪ್ರದೇಶಗಳಲ್ಲಿ ಪೊಲೀಸರು ಡಬ್ಬಲ್ ಲಾಕ್ ಭದ್ರತೆ ಏರ್ಪಡಿಸಿದ್ದಾರೆ. ಇದರ ಅಂಗವಾಗಿ 6 ಗ್ರಾಮಪಂಚಾಯತ್ ಗಳು ಮತ್ತು ಕಾಸರಗೋಡು ನಗರಸಭೆ ಪೊಲೀಸ್ ಬಿಗಿ ಸುಪರ್ದಿಯಲ್ಲಿದೆ. ಕೊರೊನಾ ಸೋಂಕು ಅತ್ಯಧಿಕ ಪ್ರಮಾಣದಲ್ಲಿ ಖಚಿತಗೊಂಡಿರುವ ಪ್ರದೇಶಗಳಲ್ಲಿ ರಾಜ್ಯ ಸರಕಾರದ ಆದೇಶ ಪ್ರಕಾರ ಈ ಡಬ್ಬಲ್ ಲಾಕ್ ಭದ್ರತೆ ಏರ್ಪಡಿಸಲಾಗಿದೆ.
ಕಾಸರಗೋಡು ನಗರಸಭೆ, ಮಧೂರು, ಮೊಗ್ರಾಲ್ ಪುತ್ತೂರು, ಚೆಂಗಳ, ಚೆಮ್ನಾಡ್, ಪಳ್ಳಿಕ್ಕರೆ, ಉದುಮಾ ಗ್ರಾಮಪಂಚಾಯತ್ ಗಳಲ್ಲಿ ಪೊಲೀಸರ ವಿಶೇಷ ನಿಗಾದಲ್ಲಿವೆ. ಕಾಸರಗೋಡು ನಗರಸಭೆಯ ಹೊಸಬಸ್ ನಿಲ್ದಾಣ, ಹಳೆ ಬಸ್ ನಿಲ್ದಾಣ, ಉಳಿಯತ್ತಡ್ಕ, ತಳಂಗರೆ, ನೆಲ್ಲಿಕುಂಜೆ ಬೀಚ್, ಮಾರುಕಟ್ಟೆ ಪ್ರದೇಶಗಳಲ್ಲಿ, ಮಧೂರು ಗ್ರಾಮಪಂಚಾಯತ್ ನ ಮಾಯಿಪ್ಪಾಡಿ, ಕಂಬಾರ್-ಬೆದ್ರಡ್ಕ ಪ್ರದೇಶಗಳು, ಪಳ್ಳಿಕ್ಕರೆ ಗ್ರಾಮಪಂಚಾಯತ್ ನಲ್ಲಿ ಬೇಕಲಕೋಟೆ ಆಸುಪಾಸಿನ ಪ್ರದೇಶಗಳು, ಬೇಕಲಜಂಕ್ಷನ್, ಪಳ್ಳಿಕ್ಕರೆ ಪೇಟೆ ಪ್ರದೆಶಗಳಲ್ಲೂ, ಉದುಮಾ ಗ್ರಾಮಪಂಚಾಯತ್ ನ ಪಾಲಕುನ್ನು, ಉದುಮಾ ಪೆಟೆಗಳು, ಚೆಮ್ನಾಡ್ ಗ್ರಾಮಪಂಚಾಯತ್ ನ ಕಳನಾಡ್, ಮೇಲ್ಪರಂಬ, ಕೋಳಿಯಡ್ಕ, ಚಟ್ಟಂಚಾಲ್ ಪೇಟೆ, ಪೊಯಿನಾಚಿ, ಮಾಂಗಾಡ್ ಪ್ರದೇಶಗಳು, ಚಂಗಳ ಗ್ರಾಮಪಂಚಾಯತ್ ನ ಚೆರ್ಕಳ ಪೇಟೆ, ಎಡನೀರು, ನಾಯನ್ಮಾರುಮೂಲೆ, ಬಿ.ಸಿ.ರೋಡ್ ಜಂಕ್ಷನ್, ಬೇವಿಂಜೆ ಪ್ರದೇಶಗಳು, ಮೊಗ್ರಾಲ್ ಪುತ್ತೂರು ಗ್ರಾಮಪಂಚಾಯತ್ ನ ಎರಿಯಾಲ್, ಮೊಗ್ರಾಲ್ ಪುತ್ತೂರು ಪೇಟೆ, ಸಿರಿಬಾಗಿಲು ಪ್ರದೇಶಗಳು ಪೊಲೀಸರ ವಿಶೇಷ ಭದ್ರತೆಯಲ್ಲಿದೆ.
ಈ ಪ್ರದೇಶಗಳಲ್ಲಿ ಪೊಲೀಸರ ಸರ್ಪಗಾವಲಿದೆ. ಜನಮನೆಗಳಿಂದ ಹೊರಗಿಳಿಯಲು ಅನುಮತಿಯಿರುವುದಿಲ್ಲ. ಅನಿವಾರ್ಯ ಸಾಮಾಗ್ರಿಗಳ ಸಹಿತ ಸೇವೆಗಳನ್ನು ಪೊಲೀಸರೇ ತಲಪಿಸುವರು. ಇದಕ್ಕಾಗಿ 949735780 ಎಂಬ ವಾಟ್ಸಾಪ್ ಸಂಖ್ಯೆಗೆ ಜನ ಸಂದೇಶ ಕಳುಹಿಸಬೇಕು. ಇದರ ಹಿನ್ನೆಲೆಯಲ್ಲಿ ಪೊಲೀಸರು ಅನಿವಾರ್ಯ ಸಾಮಾಗ್ರಿಗಳನ್ನು ಮನೆಗಳಿಗೆ ತಲಪಿಸುವರು. ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಅಗತ್ಯದ ಸಾಮಾಗ್ರಿಗಳ ಪಟ್ಟಿ ಇತ್ಯಾದಿ ಈ ನಂಬರ್ ಗೆ ಕಳುಹಿಸಬೇಕು.
ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವದುದರಿಂದ ಈ ಕ್ರಮ ಕೈಗೊಳ್ಳಲಾಗಿದೆ.