ಮಂಗಳೂರು, ಏ 01 (DaijiworldNews/SM): ದೆಹಲಿಯಲ್ಲಿ ನಡೆದ ನಿಜಾಮುದ್ದೀನ್ ಸಮಾವೇಶದಲ್ಲಿ ಭಾಗವಹಿಸಿ ದ.ಕ. ಜಿಲ್ಲಾಸ್ಪತ್ರೆಯಲ್ಲಿ ನಿಗಾದಲ್ಲಿರುವವರನ್ನು ಖಾಸಗಿ ಕಟ್ಟಡಕ್ಕೆ ಸ್ಥಳಾಂತರಿಸುವ ಮೂಲಕ ಆತಂಕ ಹೆಚ್ಚಾಗಿದೆ.
ರಾಷ್ಟ್ರ ರಾಜಧಾನಿ ನಿಜಾಮುದ್ದೀನ್ ಸಮಾವೇಶದಲ್ಲಿ ಭಾಗಿಯಾಗಿದ್ದ ಜಿಲ್ಲೆಯ ಇಪ್ಪತ್ತೊಂದು ಮಂದಿಯನ್ನು ಉಳ್ಳಾಲದ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯ ಎದುರಿನ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ವಿದ್ಯಾರ್ಥಿಗಳೇ ಅಧಿಕ ಸಂಖ್ಯೆಯಲ್ಲಿರುವ ಕಟ್ಟಡದ ಎದುರಿನ ಖಾಸಗಿ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಖಾಸಗಿ ಆಸ್ಪತ್ರೆಯ ಎದುರಿನ ಕಟ್ಟಡದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ನೆಲೆಸಿದ್ದಾರೆ. ವಿದ್ಯಾರ್ಥಿಗಳೇ ಅಧಿಕ ಸಂಖ್ಯೆಯಲ್ಲಿರುವ ಕಟ್ಟಡಕ್ಕೆ ನಿಜಾಮುದ್ದಿನ್ ನಿಗಾದಲ್ಲಿರುವವರನ್ನು ಸ್ಥಳಾಂತರ ಮಾಡಲಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಜಿಲ್ಲಾಸ್ಪತ್ರೆಯಿಂದ ಖಾಸಗಿ ಕಟ್ಟಡಕ್ಕೆ ಸ್ಥಳಾಂತರ ಮಾಡಿರುವುದಕ್ಕೆ ಕಾರಣ ಏನು ಎಂಬುವುದು ತಿಳಿದಿಲ್ಲ.
ಕೊರೊನಾ ಚಿಕಿತ್ಸೆಗೆ ವೆನ್ಲಾಕ್ ವಿಶೇಷ ಆಸ್ಪತ್ರೆಯಾಗಿ ಕಾಯ್ದಿರಿಸಲಾಗಿದೆ. ವೆನ್ಲಾಕ್ ಆಸ್ಪತ್ರೆಯಿದ್ದರೂ ಖಾಸಗಿ ಕಟ್ಟಡಕ್ಕೆ ಸ್ಥಳಾಂತರ ಮಾಡಿರುವುದೇ ಇದೀಗ ಕುತೂಹಲಕ್ಕೆ ಕಾರಣವಾಗಿದೆ. ಅಲ್ಲದೆ, ಖಾಸಗಿ ಕಟ್ಟಡಕ್ಕೆ ಸ್ಥಳಾಂತರಿಸಿರುವುದಕ್ಕೆ ಸಾರ್ವಜನಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ.