ವಿಟ್ಲ,ಏ 2 (Daijiworld News/MSP): ಲಾಕ್ಡೌನ್ ನಡುವೆ ಕಳವು ಮಾಡಿದ ಗೋವುಗಳನ್ನು ಅಕ್ರಮವಾಗಿ ಸಾಗಾಟ ಮಾಡುವ ಖಚಿತ ಮಾಹಿತಿ ಮೇರೆಗೆ ವಿಟ್ಲ ಪೊಲೀಸ್ ಸಬ್ ಇನ್ಸ್ಪೆಕ್ಟರ್ ವಿನೋದ್ ಕೆ. ಎಸ್. ನೇತೃತ್ವದ ತಂಡ ದಾಳಿ ನಡೆಸಿದ್ದು, ಮೂರು ಹಸು ಸೇರಿದಂತೆ ವಾಹನವನ್ನು ಒಕ್ಕೆತ್ತೂರಿನಲ್ಲಿ ಬುಧವಾರ ವಶಕ್ಕೆ ಪಡೆಯಲಾಗಿದೆ.
ವಾಹನದಲ್ಲಿದ್ದ ಮೂವರು ತಪ್ಪಿಸಿಕೊಂಡಿದ್ದಾರೆ. ಬಂದ್ ಮಧ್ಯಯೂ ವಿಟ್ಲದಲ್ಲಿ ದನ ಸಾಗಣೆ ಮಾಡಲಾಗುತ್ತಿರುವ ಮಾಹಿತಿ ಆಧರಿಸಿ ವಾಹನಗಳ ಮೇಲೆ ನಿಗಾ ಇಟ್ಟಿದ್ದರು. ಬುಧವಾರ ಒಳ ರಸ್ತೆಗಳ ಮೂಲಕ ಒಂದು ಹಸು ಹಾಗೂ ಮೂರು ಕರುಗಳನ್ನು ಕಸಾಯಿಖಾನೆಗೆ ಕೊಂಡೊಯ್ಯುವುದಕ್ಕೆ ತಯಾರಿ ನಡೆಸಲಾಗಿತ್ತು. ಒಕ್ಕೆತ್ತೂರು ಕಡೆಯಿಂದ ಕೋಡಪದವು ರಸ್ತೆ ಮೂಲಕ ಸಾಲೆತ್ತೂರು ಕಡೆಗೆ ಬೆಳಗ್ಗಿನ ಜಾವ ಪಿಕಪ್ ವಾಹನದಲ್ಲಿ ಕೊಂಡೊಯ್ಯುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದಾರೆ.ವಾಹನ ಹಾಗೂ ಜಾನುವಾರು ವಶಕ್ಕೆ ಪಡೆಯಲಾಗಿದೆ.
ಬಂಟ್ವಾಳ ಡಿವೈಎಸ್ಪಿ ವೆಲೆಂಟನ್ ಡಿಸೋಜ್ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಟಿ. ಡಿ. ನಾಗರಾಜ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಲಾಗಿತ್ತು. ವಿಟ್ಲ ಪಿ ಎಸ್ ಐ ವಿನೋದ್ ರೆಡ್ಡಿ, ಸಿಬ್ಬಂದಿ ಪ್ರಸನ್ನ, ಹೇಮರಾಜ್, ವಿನೋದ್, ಮಧು ತಂಡದಲ್ಲಿ ಇದ್ದರು