ಮಂಗಳೂರು, ಏ 2 (Daijiworld News/MSP): ಕೊರೋನಾ ವೈರಸ್ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಲಾಕ್ಡೌನ್ ಘೋಷಿಸಿರುವ ಹಿನ್ನೆಲೆ, ವಾಹನಗಳ ಸಂಚಾರಕ್ಕೆ ನಿರ್ಬಂಧವಿದ್ದರೂ ಜಿಲ್ಲೆಯಲ್ಲಿ ಸಾರ್ವಜನಿಕರು ಅನಗತ್ಯವಾಗಿ ವಾಹನಗಳಲ್ಲಿ ಸಂಚರಿಸುತ್ತಿರುವುದು ಸಾಮಾನ್ಯವಾಗಿದೆ. ಹೀಗಾಗಿ ಖಾಸಗಿ ವಾಹನಗಳು, ದ್ವಿಚಕ್ರ ವಾಹನಗಳು , ಕಾರುಗಳು ಸೇರಿ ಎಲ್ಲಾ ವಿಧದ ವಾಹನ ಸಂಚಾರದ ಮೇಲೆ ಏ.2 ರ ಮಧ್ಯಾಹ್ನ 12.30 ಸಂಪೂರ್ಣ ನಿಷೇಧ ನಿಷೇಧ ಹೇರಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ. ಪಿ ಎಸ್ ಹರ್ಷಾ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಆಯುಕ್ತರು, ತುರ್ತು ವೈದ್ಯಕೀಯ ಅಗತ್ಯಗಳಿಗಾಗಿ ಜನರು ಆಂಬ್ಯುಲೆನ್ಸ್ ಸೇವೆಗಳನ್ನು ಪಡೆಯಬಹುದು ಎಂದಿದ್ದಾರೆ.
ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಲಾಕ್ಡೌನ್ ಜಾರಿಗೊಳಿಸಿದೆ. ಆದರೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಜನರು ವಾಹನಗಳಲ್ಲಿ ಸಂಚರಿಸುತ್ತಿದ್ದಾರೆ. ನಾಗರಿಕರು ಸ್ವಯಂ ನಿರ್ಬಂಧ ವಿಧಿಸಿಕೊಂಡು ಮನೆಯಲ್ಲಿ ಸುರಕ್ಷಿತವಾಗಿರಬೇಕು. ವಿವರವನ್ನು ಶೀಘ್ರದಲ್ಲೇ ಜಿಲ್ಲಾಡಳಿತ ಹೊರಡಿಸಲಿದೆ .. ಎಲ್ಲರೂ ಸಹಕರಿಸಬೇಕು ಎಂದು ಆಯುಕ್ತರು ಟ್ವೀಟ್ ನಲ್ಲಿ ಮನವಿ ಮಾಡಿದ್ದಾರೆ.