ಮಂಗಳೂರು, ಏ 2 (Daijiworld News/MSP): ಮಂಗಳೂರು-ಕಾಸರಗೋಡು ಗಡಿ ರಾಷ್ಟ್ರೀಯ ಹೆದ್ದಾರಿ ರಸ್ತೆಗಳನ್ನು ತುರ್ತು ವೈದ್ಯಕೀಯ ಸೇವೆಗಳಿಗಾಗಿ ತಕ್ಷಣ ತೆರವುಗೊಳಿಸುವಂತೆ ಕೇರಳ ಸರ್ಕಾರ ಕೇಂದ್ರ ಸರ್ಕಾರ ಹಾಗೂ ಕೇರಳ ಹೈಕೋರ್ಟ್ ಬಾಗಿಲು ತಟ್ಟಿದ ಬೆನ್ನಲ್ಲೇ ಕರಾವಳಿಯ ಬಿಜೆಪಿ ನಾಯಕರು ಪಿನರಾಯಿ ವಿಜಯನ್ ನೇತೃತ್ವದ ಕೇರಳ ಸರ್ಕಾರದ ವಿರುದ್ದ ವ್ಯಂಗ್ಯವಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಶಾಸಕ ವೇದವ್ಯಾಸ್ ಕಾಮತ್ " ಅಂದು ದೇಶದಲ್ಲೇ ಅತ್ಯುತ್ತಮ ವೈದ್ಯಕೀಯ ವ್ಯವಸ್ಥೆ ನಮ್ಮದೆಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಗೆ ಸವಾಲು ಹಾಕಿದ ಕೇರಳದ ಮುಖ್ಯಮಂತ್ರಿ ಪಿನರಾಯಿಯವರು ಈಗ ಯಾಕೆ ಮಂಗಳೂರು ಆಸ್ಪತ್ರೆಗಳ ಸಹಾಯ ಕೇಳುತ್ತಿದ್ದಾರೆ" ಎಂದು ಪ್ರಶ್ನಿಸಿದ್ದಾರೆ.
ಇನ್ನು ಸಂಸದ ನಳಿನ್ ಕುಮಾರ್ ಟ್ವೀಟ್ ಮಾಡಿ " ನಮ್ಮದು ಕೇರಳ ಮಾದರಿ ಎಂದು ದೇಶದ ಎದುರು ಬಡಾಯಿ ಕೊಚ್ಚಿಕೊಂಡ ಕೇರಳ ಸರ್ಕಾರ ವೈದ್ಯಕೀಯ ಸೌಲಭ್ಯಕ್ಕೆ ಮಾತ್ರ ಪರ ರಾಜ್ಯವನ್ನು ಅವಲಂಬಿಸಿದ್ದು ದುರಂತವೇ ಸರಿ!ಕೊರೊನಾ ದಂತಹ ಮಾರಣಾಂತಿಕ ಖಾಯಿಲೆಯ ಸಂದರ್ಭದಲ್ಲಿ ನಮ್ಮ ರಾಜ್ಯದ ಜನರ ರಕ್ಷಣೆಯೆ ನಮ್ಮ ಮೊದಲ ಆದ್ಯತೆ ಅದರಲ್ಲಿ ಯಾವ ಅನುಮಾನವೂ ಬೇಡ"ಎಂದು ಹೇಳಿದ್ದಾರೆ.
ಕಾಸರಗೋಡಿನ ಜನರು ಮತ್ತು ನಾವು ಯಾವಾಗಲೂ ಅನ್ಯೋನ್ಯತೆಯಿಂದ ಇದ್ದವರು. ಇಲ್ಲಿಯ ತನಕ ಶಿಕ್ಷಣವಿರಲಿ, ಆರೋಗ್ಯ ಸೌಲಭ್ಯವಿರಲಿ ಯಾವುದಕ್ಕೂ ತಡೆದವರಿಲ್ಲ .ಆದರೆ ಇಂದಿನ ಪರಿಸ್ಥಿತಿ ಕಠಿಣವಾದದ್ದು ನಿಮ್ಮ ಬೇಳೆ ಬೇಯಿಸಿಕೊಳ್ಳಲು ನಮ್ಮ ಮಧ್ಯೆ ತಂದಿಡದಿರಿಮಾನ್ಯ ಪಿನರಾಯಿ ವಿಜಯನ್ ಅವರೇ ದಯವಿಟ್ಟು ಅವರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಿ ಎಂದು ಮತ್ತೊಂದು ಟ್ವೀಟ್ ನಲ್ಲಿ ಉಲ್ಲೇಖಿಸಿದ್ದಾರೆ.
"ಬೇರೆ ಸಂದರ್ಭದಲ್ಲಿ ಕೇರಳ ಜನರು ಮಂಗಳೂರಿಗೆ ಚಿಕಿತ್ಸೆಗೆ ಬರುವುದನ್ನು ಯಾರೂ ತಡೆಯಲಿಲ್ಲ ಆದರೆ ಕೊರೊನಾದಂತಹ ಪರಿಸ್ಥಿತಿಯಲ್ಲಿ ಜನರ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕಾದದ್ದು ಆಯಾ ರಾಜ್ಯ ಸರ್ಕಾರಗಳ ಹೊಣೆಯಾಗಿದೆ. ಅಂತೆಯೇ ಕರ್ನಾಟಕ ಸರ್ಕಾರವು ತನ್ನ ಜನರನ್ನು ರಕ್ಷಿಸಲು ಕೆಲವು ಕ್ರಮ ಕೈಗೊಂಡಿದೆ"ಎಂದು ರಾಜ್ಯಗಳ ಹೆದ್ದಾರಿ ಬಂದ್ ಮಾಡಿರುವುದನ್ನು ಸಮರ್ಥಿಸಿಕೊಂಡಿದ್ದಾರೆ
ಕಾಸರಗೋಡಿನ ರೋಗಿಗಳು ಚಿಕಿತ್ಸೆಗಾಗಿ ಮಂಗಳೂರಿಗೇ ಹೋಗಬೇಕಾದ ಅನಿವಾರ್ಯತೆ ಇದೆ, ಹೀಗಾಗಿ ಹೆದ್ದಾರಿ ತೆರೆಯಬೇಕು. ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ನೀಡದ ಕಾರಣ 6 ಮಂದಿ ಮೃತಪಟ್ಟಿದ್ದಾರೆ. ಕಾಸರಗೋಡಿನ ಜನರು ದಶಕಗಳಿಂದಲೂ ವೈದ್ಯಕೀಯ ಸೇವೆಗಾಗಿ ಮಂಗಳೂರನ್ನೇ ಅವಲಂಬಿಸಿದ್ಧಾರೆ ಎಂದು ಕೇರಳ ಸರ್ಕಾರ ಹೈಕೋರ್ಟ್ನಲ್ಲಿ ಪ್ರಮಾಣ ಪತ್ರವನ್ನೂ ನೀಡಿ ವಾದ ಮಂಡಿಸಿತ್ತು.