Karavali
'ನಾವು ನಿಮ್ಮೊಂದಿಗೆ' – ದಾಯ್ಜಿವರ್ಲ್ಡ್ ಸಂಸ್ಥೆಯಿಂದ 'ಲಾಕ್ ಡೌನ್ ಸಂತ್ರಸ್ತರಿಗೆ' ಸಹಾಯ ಹಸ್ತದ ಅಭಿಯಾನ
- Thu, Apr 02 2020 02:53:09 PM
-
ವಾಲ್ಟರ್ ನಂದಳಿಕೆ,
ಸಂಸ್ಥಾಪಕರು,
ದಾಯ್ಜಿವರ್ಲ್ಡ್ ಮೀಡಿಯಾ ಸಮೂಹ ಸಂಸ್ಥೆ.
ಪ್ರಿಯ ಓದುಗರೇ,
ಕೊರೊನಾ ವೈರಸ್ ಎಂಬ ಮಹಾಮಾರಿಯು ಪ್ರತಿಯೊಬ್ಬರ ದೈನಂದಿನ ಜೀವನವನ್ನು ಬುಡಮೇಲು ಮಾಡಿದೆ. ಬಡವ, ಶ್ರೀಮಂತ, ಅನಕ್ಷರಸ್ಥ,ವಿದ್ಯಾವಂತ ಎಂಬ ಭೇದವಿಲ್ಲದೆ ಪ್ರತಿಯೊಬ್ಬರೂ ’ಕೋವಿಡ್-19’ ಅಥವಾ ’ಕೊರೋನಾ ವೈರಸ್ ಕಾಯಿಲೆ 2019’ ಮುಂದೆ ತಲೆತಗ್ಗಿಸಿ ನಿಲ್ಲುವಂತಹ ಸ್ಥಿತಿ ಉಂಟಾಗಿದೆ. ಈ ಮಹಾಮಾರಿಯನ್ನು ಎದುರಿಸಿ ಗೆಲ್ಲಲು, "ಕಟ್ಟುನಿಟ್ಟಿನ ಜೀವನ ಶೈಲಿ" ಮತ್ತು "ಧೈರ್ಯ " ಎಂಬ ಸಾಧನೆ ಬಿಟ್ಟು ಬೇರೆ ದಾರಿಯಿಲ್ಲದಂತಾಗಿದೆ.
ಪ್ರಾಥಮಿಕವಾಗಿ ಈಗ ನಮ್ಮ ಮುಂದೆ ಎರಡು ಬಲುದೊಡ್ಡ ಸಮಸ್ಯೆಗಳಿವೆ. ಅವುಗಳಲ್ಲಿ ಪ್ರಥಮವಾಗಿ ಸೋಂಕಿತರ ಆರೈಕೆಯೊಂದಿಗೆ ಸೋಂಕಿತರಿಂದ, ಸೋಂಕು ಶಂಕಿತರಿಂದ ಸ್ವತ: ಕಾಪಾಡಿಕೊಳ್ಳುವಿಕೆ ಹಾಗೂ ಸುರಕ್ಷಿತರಾಗಿದ್ದೇವೆ ಎಂದು ಖಾತರಿಪಡಿಸಿಕೊಳ್ಳುವಿಕೆ. ಎರಡನೆಯದಾಗಿ ಲಾಕ್ ಡೌನ್ ಘೋಷಣೆಯ ನಂತರ ಅಸಹಾಯಕರಾದ ಜನತೆ ಎದುರಿಸುತ್ತಿರುವ ಕಠಿಣ ಪರಿಸ್ಥಿತಿ.
ಕೆಲ ಪ್ರದೇಶಗಳಲ್ಲಿ ಅಗತ್ಯ ಸಮಯದಲ್ಲಿ ಮನೆಯಲ್ಲಿ ಸಹಾಯಕ್ಕಾಗಿ ಯಾರೂ ಇಲ್ಲದೆ ಬದುಕುವ ವೃದ್ದಾಪ್ಯರಿದ್ದಾರೆ. ಇನ್ನು ಕೆಲ ಮನೆಗಳಲ್ಲಿ ನಿವೃತ್ತಿ ಜೀವನ ಸಾಗಿಸುತ್ತಿರುವ ಹಾಗೂ ತಮ್ಮ ಪಾಡಿಗೆ ಬದುಕುವ ಹಿರಿಯ ನಾಗರಿಕರಿದ್ದಾರೆ. ಆದರೆ ಅವರ ವೃದ್ದಾಪ್ಯ ಅವರನ್ನು ಔಷಧಿ ಅಂಗಡಿಗಳಲ್ಲಿ ಸರತಿ ನಿಲ್ಲಲು ಅನುವು ಮಾಡಿಕೊಡುವುದಿಲ್ಲ. ಈ ಬಗ್ಗೆ ಸಹಾಯ ಹಾಗೂ ಸಮಸ್ಯೆಗಳನ್ನು ಹೇಳಿಕೊಂಡು ಕಳೆದ ಒಂದು ವಾರದಿಂದ ನಮ್ಮ ಕಚೇರಿಗೆ ಅಸಂಖ್ಯಾತ ಕರೆಗಳು ಬರುತ್ತಿವೆ. ನಮ್ಮದೇ ನೆಲೆಯಲ್ಲಿ ನಮ್ಮ ತಂಡ ಇಂತಹ ಹಲವು ಕರೆಗಳಿಗೆ ಓಗೊಟ್ಟು ಸಾಧ್ಯವಾದ ರೀತಿಯಲ್ಲಿ ಸಹಾಯ ಮಾಡುವಲ್ಲಿ ಯಶಸ್ವಿಯಾಗಿದೆ. ಆದರೂ ಸಹಾಯಕ್ಕಾಗಿ ಕರೆಮಾಡಿ ಬೇಡಿಕೊಳ್ಳುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ’ಅಸಹಾಯಕರ ಅಗತ್ಯತೆ ’ಯನ್ನು ಮನಗಂಡು ಇದೀಗ ನಾವು ಇದಕ್ಕಾಗಿ ಒಂದು ಅಭಿಯಾನದ ಅಗತ್ಯವಿದೆ ಎಂಬ ನಿರ್ಧಾರಕ್ಕೆ ಬಂದಿದ್ದೇವೆ. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ, ಸಂಸದ, ಶಾಸಕ ಹಾಗೂ ಇತರ ಜನಪ್ರತಿನಿಧಿಗಳ ನೇತೃತ್ವದಲ್ಲಿ ಜಿಲ್ಲಾಡಳಿತವು ಈ ನಿಟ್ಟಿನಲ್ಲಿ ಶಕ್ತಿ ಮೀರಿ ಶ್ರಮಿಸುತಿದೆ. ಆದರೂ ಕೆಲ ಇತಿಮಿತಿಗಳಿಂದಾಗಿ ಜಿಲ್ಲಾಡಳಿತದ ಸೇವೆಯು ಎಲ್ಲರಿಗೂ ಏಕ ಕಾಲದಲ್ಲಿ ತಲುಪಲು ಸಾಧ್ಯವಿದೆ ಎಂದು ಹೇಳಲು ಸಾಧ್ಯವಿಲ್ಲ
ಪ್ರಸ್ತುತ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು Daijiworld 24x7 TV ಸುದ್ದಿವಾಹಿನಿ ಹಾಗೂ daijiworld.com ಜತೆಯಾಗಿ ಲಾಕ್ ಡೌನ್ ವೇಳೆಯಲ್ಲಿ ಅಸಹಾಯಕರಿಗೆ ಸಹಾಯ ಹಸ್ತ ಚಾಚುವ “ನಾವಿದ್ದೇವೆ ನಿಮ್ಮೊಂದಿಗೆ’ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ. ಈ ಕಾರ್ಯಕ್ರಮದಡಿ ನಾವು ವೀಕ್ಷಕರು/ಓದುಗರಿಂದ ಯಾವುದೇ ಆರ್ಥಿಕ ಸಹಾಯವನ್ನು ಕೇಳಿಕೊಳ್ಳುತ್ತಿಲ್ಲ. ಬದಲಾಗಿ ಈ ಕಾರ್ಯಕ್ರದಲ್ಲಿ/ಯೋಜನೆಯಲ್ಲಿ ಭಾಗಿಯಾಗಿ ಹಾಗೂ ನಮಗೆ ಪ್ರೋತ್ಸಾಹ ನೀಡಿ. ಈ ಮೂಲಕ ನೀವು ಧನಸಹಾಯಕ್ಕಿಂತಲೂ ಮಿಗಿಲಾದ ಸೇವೆಯನ್ನು ಮಾಡಬಹುದಾಗಿದೆ.
1. ನಿಮ್ಮ ಆಸುಪಾಸಿನಲ್ಲಿ ಯಾರಾದರೂ ಪಡಿತರ, ಔಷಧಿ ಹಾಗೂ ಇತರ ತುರ್ತು ಸೇವೆ ದೊರೆಯದೆ ಸಂಕಷ್ಟದಲ್ಲಿದ್ದಾರೆ ಎಂದು ನಿಮಗೆ ತಿಳಿದರೆ ಫೋನ್ ಕರೆ, ವಾಟ್ಸಾಪ್ ಸಂದೇಶ ಅಥವಾ ವಾಯ್ಸ್ ಮೆಸೇಜ್ ಮೂಲಕ ನಮಗೆ ತಿಳಿಸಬಹುದು. ನಾವು ಅಂತಹ ವ್ಯಕ್ತಿಗಳನ್ನು ಸ್ಥಳೀಯ ಸರಕಾರಿ ಸಂಸ್ಥೆಗಳು, ಜನಪ್ರತಿನಿಧಿಗಳು , ಅಥವಾ ಸಮಾಜ ಸೇವೆಯಲ್ಲಿ ತೊಡಗಿರುವ ಸ್ವಯಂಸೇವಕರ ಹಾಗೂ ಸಂಸ್ಥೆಗಳ ಮೂಲಕ ಸಂಪರ್ಕಿಸಲು ಪ್ರಯತ್ನಿಸುತ್ತೇವೆ. ಸಹಾಯಕ್ಕಾಗಿ ಬೇಡಿಕೆ ಇಟ್ಟವರಿಗೆ ಸಹಾಯ ದೊರೆಯುವ ತನಕ ನಾವು ವಿಶ್ರಮಿಸುವುದಿಲ್ಲಎಂಬುದನ್ನು ನಾವು ಇಂದು ಇಲ್ಲಿ ಧೃಡಪಡಿಸುತ್ತೇವೆ. (ಸಂಪರ್ಕಿಸಿ: 0091- 8217466588)
2. ಜಿಲ್ಲಾಡಳಿತದಿಂದ ಅಧಿಕೃತ ಅನುಮತಿ ಪಡೆದ ಸಮಾಜ ಸೇವೆಯಲ್ಲಿ ತೊಡಗಿರುವ ಸಂಘಟನೆಗಳು, ಸಂಸ್ಥೆಗಳು, ವ್ಯಕ್ತಿಗಳು ಅವರ ಕಾರ್ಯಕ್ಷೇತ್ರದ ವಿವರ ಹಾಗೂ ಸಂಪರ್ಕಕ್ಕಾಗಿ ದೂರವಾಣಿ ಸಂಖ್ಯೆಗಳನ್ನು ನಮಗೆ ಕಳುಹಿಸಿಕೊಡಬಹುದು. ಅಗತ್ಯವಿರುವ ವ್ಯಕ್ತಿಗಳಿಗೆ ತಲುಪಲು ನಾವು ನಿಮಗೆ ಸಹಕರಿಸುತ್ತೇವೆ. (ಸಂಪರ್ಕಿಸಿ: 0091-9481733247)
ನಮ್ಮ ಉದ್ದೇಶ ಕೇವಲ ಸಹಾಯಕ್ಕಾಗಿ ಕೈಯೊಡ್ಡುತ್ತಿರುವ ವ್ಯಕ್ತಿಗಳಿಗೆ ಹಾಗೂ ಸಹಾಯಹಸ್ತ ಚಾಚುವವರ ನಡುವೆ ಸಂದೇಶ ವಾಹಕರಂತೆ ಕಾರ್ಯ ನಿರ್ವಹಿಸುವುದಾಗಿದೆ.
(ಸೂಚನೆ: ಆರ್ಥಿಕವಾಗಿ ಅನುಕೂಲವಂತರಾಗಿದ್ದು ಮನೆಯಲ್ಲಿ ಒಬ್ಬಂಟಿಗರಾಗಿ ಅಥವಾ ಅನಾರೋಗ್ಯ , ವೃದ್ಧಾಪ್ಯದಿಂದಾಗಿ ನಿಗದಿತ ಸಮಯದಲ್ಲಿ ಅಗತ್ಯ ವಸ್ತುಗಳನ್ನು ಖರೀದಿಸಲು ಅಸಾಧ್ಯವಾದವರು ನಮಗೆ ಕರೆಮಾಡಿದಲ್ಲಿ ನಮ್ಮ ಸ್ವಯಂ ಸೇವಕರು ಯಾವುದೇ ಸೇವಾ ಶುಲ್ಕವಿಲ್ಲದೆ ದಿನಸಿ, ತರಕಾರಿ ಹಾಗೂ ಔಷಧಿಗಳನ್ನು ನಿಮ್ಮ ಮನೆಗೆ ತಲುಪಿಸಲಿದ್ದಾರೆ.)
ಅನಿವಾಸಿ ಭಾರತೀಯರಲ್ಲಿ ವಿನಂತಿ: ನೀವು ನಮ್ಮ ದೇಶದ ಆರ್ಥಿಕತೆಯ ಬೆನ್ನೆಲುಬು ಎಂದರೆ ತಪ್ಪಾಗಲಾರದು. ಇದೀಗ ನೀವು ಬಹುದೊಡ್ಡ ಸಂಕಷ್ಟದಲ್ಲಿದ್ದೀರಿ. ಆದರೆ ನಮ್ಮ ದೇಶಕ್ಕೆ , ನಮ್ಮ ಸಮಾಜಕ್ಕೆ ನೀವು ನೀಡಿದ ಸೇವೆ, ಕೊಡುಗೆಯು ಸ್ಮರಣೀಯ. ಆದೂದರಿಂದ ಕೊರೊನಾ ಭೀತಿಯಿಂದಾಗಿ ಏಕಾಂಗಿಗಳಾಗಿದ್ದೀರಿ ಎಂಬ ವ್ಯಥೆ ಬೇಡ. ನಿಮ್ಮ ಆತ್ಮೀಯರು, ಕುಟುಂಬಸ್ಥರು ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದರೆ ನಮ್ಮನ್ನು ಸಂಪರ್ಕಿಸಿ. ನಾವು ನಿಮ್ಮವರಿಗೆ ಸಹಾಯ ಮಾಡಲು ತಯಾರಿದ್ದೇವೆ.
ಮಹತ್ತರವಾದ ಹಾಗೂ ಅತೀ ಅಗತ್ಯದ ಈ ಯೋಜನೆಗೆ ಸಹಕರಿಸುವಂತೆ ದಾಯ್ಜಿವರ್ಲ್ಡ್ ಸುದ್ದಿವಾಹಿನಿ ಹಾಗೂ ದಾಯ್ಜಿವರ್ಲ್ಡ್ ಡಾಟ್ ಕಾಮ್ ಇದರ ಎಲ್ಲಾ ವೀಕ್ಷಕರಲ್ಲಿ ಹಾಗೂ ಓದುಗರಲ್ಲಿ ಕಳಕಳಿಯ ವಿನಂತಿ ಮಾಡುತ್ತೇವೆ.
ಪ್ರೀತಿಯ ಓದುಗರೇ ಕಳೆದ 20 ವರ್ಷಗಳಲ್ಲಿ ನಾವು 500 ಕ್ಕಿಂತಲೂ ಹೆಚ್ಚಿನ ಕುಟುಂಬಗಳಿಗೆ ನೆರವಾಗಿದ್ದೇವೆ ಹಾಗೂ 21 ಕೋಟಿ ರುಪಾಯಿಗಳ ಸಹಾಯ ದೊರಕುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ. ಆದರೆ ಇದೀಗ ನಮ್ಮ ಮುಂದೆ ನಿಜವಾದ ಪಂಥಾಹ್ವಾನವಿದೆ. ಆದರೆ ನಾವು ಇಂದು ಧನಸಹಾಯದ ಯಾವುದೇ ಕೋರಿಕೆಯನ್ನು ನಾವು ನಿಮ್ಮ ಮುಂದಿಡುತ್ತಿಲ್ಲ. ಬದಲಾಗಿ ನಾವು ಸಂಕಷ್ಟದಲ್ಲಿರುವ ಜನರ ಬಳಿ ತಲುಪುವ ಬೇಡಿಕೆಯನ್ನು ನಿಮ್ಮ ಮುಂದಿಡುತ್ತೇವೆ.
ಎಲ್ಲರೂ ಒಗ್ಗಟ್ಟಾಗಿ, ಒಮ್ಮತದಿಂದ ಕೊರೊನಾ ಎಂಬ ಮಹಾಮಾರಿ ವಿರುದ್ಧ ಹೋರಾಡೋಣ. ನಾವು ನಿಮ್ಮೊಂದಿಗಿದ್ದೇವೆ ಅಂತೆಯೇ ನಿಮ್ಮ ಬೆಂಬಲವನ್ನು ಕೋರುತ್ತೇವೆ.
ನಮ್ಮನ್ನು ಸಂಪರ್ಕಿಸಬೇಕಾದ ವಿವರ:
ನೀವು ಎನ್ ಜಿ ಓ ಆಗಿದ್ದರೆ, ಸ್ವಯಂಸೇವಕರು ಅಥವಾ ಸಂತ್ರಸ್ತರನ್ನು ತಲುಪಲು ಸಿದ್ಧರಿದ್ದರೆ ಸಂಪರ್ಕಿಸಬೇಕಾದ ಸಂಖ್ಯೆ - 0091-9481733247
ನೀವು ಸಂತ್ರಸ್ತರಾಗಿದ್ದರೆ ಸಂಪರ್ಕಿಸಬೇಕಾದ ಸಂಖ್ಯೆ - 0091- 8217466588