ಬೆಂಗಳೂರು, ಫೆ 27 : ಜಿಲ್ಲಾ ಕೇಂದ್ರಗಳಲ್ಲಿ ಜನರಿಗೆ ರಿಯಾಯಿತಿ ದರದಲ್ಲಿ ಆಹಾರ ಪೂರೈಸುವ 'ಸವಿರುಚಿ ಸಂಚಾರಿ ಕ್ಯಾಂಟೀನ್ ’ಯೋಜನೆಗೆ ಮಂಗಳವಾರ ವಿಧಾನಸೌಧದ ಪೂರ್ವ ದ್ವಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಸ್ತ್ರೀ ಶಕ್ತಿ ಒಕ್ಕೂಟಗಳ ಮೂಲಕ ಆರಂಭಿಸಿರುವ 'ಸವಿ ರುಚಿ' ಸಂಚಾರಿ ಕ್ಯಾಂಟೀನ್ ಪ್ರತಿ ಜಿಲ್ಲೆಗೆ ಒಂದರಂತೆ ಸಂಚಾರಿ ಕ್ಯಾಂಟೀನ್ ಆರಂಭ ಮಾಡುವುದಾಗಿ ತಿಳಿಸಿದರು.
ರಾಜ್ಯದ 30 ಜಿಲ್ಲೆಗಳಲ್ಲಿ ಸವಿರುಚಿ ಕ್ಯಾಂಟೀನ್ ಸೌಲಭ್ಯ ದೊರೆಯಲಿದ್ದು , ಸ್ತ್ರೀ ಶಕ್ತಿ ಸಂಘಟನೆಗಳು ಇದರಿಂದ ಆರ್ಥಿಕವಾಗಿ ಹೆಚ್ಚು ಹೆಚ್ಚಾಗಿ ಬೆಳೆಯಲು ಸಹಕಾರಿಯಾಗಲಿದೆ. ಅತೀ ಹೆಚ್ಚು ಜನ ಸೇರುವ ಸ್ಥಳಗಳಿಗೆ ತೆರಳಿ ಕಡಿಮೆ ದರದಲ್ಲಿ "ಸವಿರುಚಿ ಸಂಚಾರಿ ಕ್ಯಾಂಟೀನ್' ಆಹಾರ ಒದಗಿಸಲಿದೆ. ಈ ಸಂಚಾರಿ ಕ್ಯಾಂಟೀನ್'ನಲ್ಲಿ ಆಯಾ ಪ್ರದೇಶದ ಆಹಾರ ಪದ್ಧತಿಗೆ ಅನುನುಗುಣವಾಗಿ ಅಡುಗೆ ತಯಾರಿಸಿ, ಅಲ್ಲಿನ ಹೊಟೇಲ್ಗಳು ನಿಗದಿ ಮಾಡುವ ದರಕ್ಕಿಂತ 5 ರೂಪಾಯಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತದೆ. ಜಾತ್ರೆ ನಡೆಯುವ ಸ್ಥಳ, ಕೈಗಾರಿಕಾ ಪ್ರದೇಶ, ಶಾಲಾ ಕಾಲೇಜು ಸೇರಿದಂತೆ ದೊಡ್ಡ ದೊಡ್ಡ ಕಾರ್ಯಕ್ರಮಗಳು ನಡೆಯುವ ಸ್ಥಳಗಳಲ್ಲಿ ಈ ಸಂಚಾರಿ ಕ್ಯಾಂಟೀನ್ ಇರಲಿದೆ. ಪ್ರತಿ ಕ್ಯಾಂಟೀನ್ನಲ್ಲಿ 11 ಮಹಿಳೆಯರು ಕಾರ್ಯನಿರ್ವಹಿಸಲಿದ್ದು, ವಾರದಲ್ಲಿ ಒಂದೆರಡು ದಿನ ಸಿರಿಧಾನ್ಯ ಅಡುಗೆ ದೊರೆಯಲಿದೆ.