ಕಾರ್ಕಳ, ಎ.02 (Daijiworld News/MB) : ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ರಾಷ್ಟ್ರ ವ್ಯಾಪ್ತಿಯಲ್ಲಿ ಲಾಕ್ಡೌನ್ ಜಾರಿಗೊಂಡಿದ್ದರೂ ಕಾರ್ಕಳ ಪುರಸಭಾ ವ್ಯಾಪ್ತಿಯ ಪ್ರಮುಖ ರಸ್ತೆಯಲ್ಲಿ ನೀರು ಸರಬರಾಜು ಮತ್ತು ಒಳಚರಂಡಿ ಕಾಮಗಾರಿಯು ಭರದಿಂದ ಸಾಗುತ್ತಿದೆ.
1994 ರಲ್ಲಿ ನಿರ್ಮಾಣಗೊಂಡಿದ್ದ ಒಳಚರಂಡಿ ಯೋಜನೆಯು ಪ್ರಸ್ತಕ ಕಾಲಘಟ್ಟದಲ್ಲಿ ದುರಸ್ಥಿಗೊಳಪಟ್ಟಿದ್ದು, ಇದರ ಹಿನ್ನಲೆಯಲ್ಲಿ ರೂ. 13 ಕೋಟಿ ವೆಚ್ಚದಲ್ಲಿ ನೂತನವಾಗಿ ಒಳ ಚರಂಡಿ ಪೈಪ್ ಲೈನ್ ಅಳವಡಿಸುವ ಕಾರ್ಯವು ಕಾರ್ಕಳ ಪುರಸಭಾ ವ್ಯಾಪ್ತಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಚೇರಿ ಸಮೀಪದ ರಸ್ತೆಯಿಂದ ಮೂರು ಮಾರ್ಗದ ವರೆಗೆ ಕಳೆದ 15 ದಿನಗಳ ಹಿಂದೆ ಪೂರ್ಣ ಗೊಂಡಿತ್ತು.
ನಡೆಸಿರುವ ಕಾಮಗಾರಿಯಲ್ಲಿ ಉಂಟಾದ ಲೋಪದೋಷವನ್ನು ಸರಿಪಡಿಸುವ ನಿಟ್ಟಿನಲ್ಲಿ ಎಪ್ರಿಲ್ 3 ರ ಬೆಳಿಗ್ಗಿನ ಜಾವದಲ್ಲಿ ಜೆಸಿಬಿ ಮೂಲಕ ರಸ್ತೆ ಹಗೆಯುವ ಕಾಮಗಾರಿ ನಡೆಸಲಾಗಿದೆ. ಇಲ್ಲಿ ಒಳಚರಂಡಿ ಕಾಮಗಾರಿ ನಡೆಯುತ್ತಿದ್ದರೂ ಮಂಡಳಿಯು ತನ್ನ ತಪ್ಪನ್ನು ಮರೆ ಮಾಚುವ ಸಲುವಾಗಿ ಕುಡಿಯುವ ನೀರಿನ ಪೈಪ್ ಸರಿಪಡಿಸಲಾಗುತ್ತದೆ ಎಂಬ ನಂಬಿಕೆಯನ್ನು ಹುಟ್ಟಿಸುವ ಕೆಲಸಕ್ಕೆ ಮುಂದಾಗಿದೆ.
ಕಾರ್ಮಿಕರಿಗೆ ಮಾಸ್ಕ್ ನೀಡಿಲ್ಲ!
ಕರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಂತರ ಕಾಪಾಡಬೇಕು. ಅದಕ್ಕೆ ಪೂರಕವಾಗಿ ಮನೆಯೊಳಗೆ ಕುಳಿತುಕೊಂಡು ವೈರಸ್ನಿಂದ ದೂರ ಉಳಿಯುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕೆ ಕರೆ ನೀಡಿ ಲಾಕ್ಡೌನ್ ಘೋಷಣೆ ಕರೆ ನೀಡಿದ್ದರು.
ಕಾಮಗಾರಿ ನಡೆಸುತ್ತಿರುವ ಬಡ ಕಾರ್ಮಿಕರು ತಮ್ಮ ಮುಖಕ್ಕೆ ಮಾಸ್ಕ್ ಅಳವಡಿಸದೇ ಇರುವುದು ಜಿಲ್ಲಾಡಳಿತ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿ ಎಂಬ ಆರೋಪ ವ್ಯಾಪಕವಾಗಿ ಕೇಳಿಬರುತ್ತಿವೆ.
"ಸಭೆ ವತಿಯಿಂದ ಯಾವುದೇ ಕಾಮಗಾರಿ ನಡೆಯುತ್ತಿಲ್ಲ. ಒಳಚರಂಡಿಯ ಕಾಮಗಾರಿಯು ಕರ್ನಾಟಕ ನೀರು ಮತ್ತು ಒಳಚರಂಡಿ ಮಂಡಳಿಯು ನಡೆಸುತ್ತಿದೆ. ಕೊರನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಮಾಸ್ಕ್ ಅಳವಡಿಸುವ ಅಗತ್ಯವಾಗಿದೆ" ಎಂದು ಪುರಸಭಾ ಮುಖ್ಯಾಧಿಕಾರಿ ರೇಖಾ ಶೆಟ್ಟಿ ಹೇಳಿದ್ದಾರೆ.
ಹಾಗೆಯೇ ಕರ್ನಾಟಕ ನೀರು ಮತ್ತು ಒಳಚರಂಡಿ ಮಂಡಳಿ ಇಂಜಿನಿಯರ್ ರಕ್ಷಿತ್ರಾವ್, "ಒಡೆದುಹೋದ ಕುಡಿಯುವ ನೀರಿನ ಪೈಪ್ ದುರಸ್ಥಿ ಕಾಮಗಾರಿ ನಡೆಸಲಾಗುತ್ತಿದೆ. ಮನೆಯಿಂದ ಹೊರ ಬರಲು ಸಾಧ್ಯವಾಗದ ಪರಿಸ್ಥಿತಿ ನನ್ನದಾಗಿದೆ. ತುರ್ತು ಕಾಮಗಾರಿಯಾಗಿರುವುದರಿಂದ ಕಾರ್ಮಿಕರು ಮಾಸ್ಕ್ ಹಾಕಿದ್ದಾರೆಯೇ ಎಂಬುವುದು ಗಮನಕ್ಕೆ ಬಂದಿಲ್ಲ" ಎಂದು ತಿಳಿಸಿದ್ದಾರೆ.