ಕಾಸರಗೋಡು, ಏ 02 (DaijiworldNews/SM): ಜಿಲ್ಲೆಯಲ್ಲಿ ಕೊರೋನಾ ಸೋಂಕು ನಿರಂತರ ಏರುಗತಿಯಲ್ಲಿದ್ದು, ನಿಯಂತ್ರಣಕ್ಕೆ ಬರುತ್ತಿಲ್ಲ. ಗುರುವಾರ ಮತ್ತೆ ಎಂಟು ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಇದರಿಂದ ಸೋಂಕಿತರ ಸಂಖ್ಯೆ 128ಕ್ಕೇರಿದೆ.
ಇನ್ನು ಕೇರಳದಲ್ಲಿ ಇಂದು 21 ಪ್ರಕರಣ ಪತ್ತೆಯಾಗಿದ್ದು, ಇಡುಕ್ಕಿ ಐದು, ಕೊಲ್ಲಂ ಎರಡು, ತಿರುವನಂತಪುರ, ಪತ್ತನಂತ್ತಿಟ್ಟ, ತ್ರಿಶೂರು, ಮಲಪ್ಪುರಂ, ಕೋಜಿಕ್ಕೋಡ್, ಕಣ್ಣೂರು ಮೊದಲಾದೆಡೆ ತಲಾ ಒಂದು ಪ್ರಕರಣ ದೃಢಪಟ್ಟಿದೆ.
ಇಂದು ಸೋಂಕು ಪತ್ತೆಯಾದವರಲ್ಲಿ ಇಬ್ಬರು ನಿಜಾಮುದ್ದೀನ್ ಸಮಾವೇಶದಲ್ಲಿ ಪಾಲ್ಗೊಂಡವರು. ಓರ್ವ ಗುಜರಾತ್ ನಿಂದ ಆಗಮಿಸಿದವರು ಎಂಬ ಮಾಹಿತಿ ಲಭ್ಯವಾಗಿದೆ. ಇದುವರೆಗೆ ರಾಜ್ಯದಲ್ಲಿ 28 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ 10, 240 ಮಂದಿ ನಿಗಾದಲ್ಲಿದ್ದಾರೆ.
ಪೈಕಿ 177 ಮಂದಿ ಆಸ್ಪತ್ರೆಯ ಐಸೋಲೇಷನ್ ವಾರ್ಡ್ ನಲ್ಲಿದ್ದಾರೆ. ಇದುವರೆಗೆ 1214 ಮಂದಿಯ ಸ್ಯಾಂಪಲ್ ಕಳುಹಿಸಲಾಗಿದೆ. ಈ ಪೈಕಿ 732 ಮಂದಿಯ ವರದಿ ನೆಗೆಟಿವ್ ಆಗಿದೆ. ಇನ್ನೂ 362 ಮಂದಿಯ ವೈದ್ಯಕೀಯ ಪರೀಕ್ಷಾ ವರದಿ ಲಭಿಸಬೇಕಿದೆ. ಇಂದು 21 ಮಂದಿಯನ್ನು ಐಸೋಲೇಷನ್ ವಾರ್ಡ್ ಗೆ ದಾಖಲಿಸಲಾಗಿದೆ.