ಬಂಟ್ವಾಳ, ಎ.03 (Daijiworld News/MB) : ಸಜಿಪನಡು ಕೊರೊನಾ ಸೋಂಕಿತ ಮಗುವಿಗೆ ಶುಶ್ರೂಷಿಸಿದಕ್ಕೆ ನರ್ಸ್ ಒಬ್ಬರನ್ನು ಗ್ರಾಮದಿಂದಲ್ಲೇ ಬಹಿಷ್ಕಾರ ಹಾಕಲಾಗಿದ್ದು ಶಾಸಕ ಯು ಟಿ ಖಾದರ್ ಅವರು ನರ್ಸ್ ಮನೆಗೆ ಭೇಟಿ ನೀಡಿದ್ದಾರೆ.
ಜ್ವರ ಹಾಗೂ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ಮಗುವನ್ನು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಗಿತ್ತು. ಕೊಣಾಜೆ ಗ್ರಾಮದವರಾದ ನರ್ಸ್ ಸರಸ್ವತಿಯವರು ಆ ಆಸ್ಪತ್ರೆಯಲ್ಲಿ ಮಗುವಿನ ಶುಶ್ರೂಷೆ ಮಾಡುತ್ತಿದ್ದರು. ಮಗುವಿನಲ್ಲಿ ಶಂಕಿತ ಕೊರೊನಾ ಸೋಂಕು ಲಕ್ಷಣ ಕಂಡುಬಂದ ಹಿನ್ನಲೆಯಲ್ಲಿ ಮಗುವಿನ ಗಂಟಲು ದ್ರವವನ್ನು ಪರೀಕ್ಷೆಗೆ ರವಾನಿಸಿದಾಗ ಕೊರೊನಾ ಇರುವುದು ದೃಢಪಟ್ಟಿತ್ತು.
ಈಗ ಕೊರೊನಾ ಸೋಂಕು ಇದ್ದ ಮಗುವಿನ ಶುಶ್ರೂಷೆ ಮಾಡಿದ್ದಾರೆ ಎಂಬ ಕಾರಣಕ್ಕೆ ನರ್ಸ್ ಸರಸ್ವತಿ ಅವರ ಕುಟುಂಬವನ್ನೇ ಗ್ರಾಮದಿಂದ ಬಹಿಷ್ಕಾರ ಹಾಕಲಾಗಿದೆ. ಈ ನಿಟ್ಟಿನಲ್ಲಿ ಶಾಸಕ ಯು.ಟಿ. ಖಾದರ್ ಅವರು ನರ್ಸ್ ಮನೆಗೆ ಭೇಟಿ ನೀಡಿ ಮಾತನಾಡಿದರು.
ತಮ್ಮ ಆರೋಗ್ಯವನ್ನು ಪಣಕ್ಕಿಟ್ಟು ನಮ್ಮ ಆರೋಗ್ಯಕ್ಕಾಗಿ ಸೇವೆ ಸಲ್ಲಿಸುವ ನರ್ಸ್, ವೈದ್ಯರನ್ನು ನಾವು ಗೌರವದಿಂದ ಕಾಣಬೇಕು. ಆದರೆ ಈ ರೀತಿ ನರ್ಸ್ನೊಂದಿಗೆ ಅಮಾನವೀಯವಾಗಿ ವರ್ತಿಸಿರುವುದು ಖಂಡನಾರ್ಹ ಎಂಬ ಮಾತುಗಳು ಕೂಡಾ ಕೇಳಿಬರುತ್ತಿದೆ.