ಕಾಸರಗೋಡು, ಎ.03 (Daijiworld News/MB) : ಕಣ್ಣೂರು ಸೆಂಟ್ರಲ್ ಜೈಲಿನ ಕೊರೊನಾ ನಿಗಾ ಕೇಂದ್ರದಿಂದ ಕೈದಿಯೋರ್ವ ಪರಾರಿಯಾದ ಘಟನೆ ಶುಕ್ರವಾರ ನಡೆದಿದೆ.
ಕಳವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಉತ್ತರ ಪ್ರದೇಶ ಮೂಲದ ಅಜಯ್ ಬಾಬು ಪರಾರಿಯಾದವರು.
ಕಾಸರಗೋಡಿನ ಕೆನರಾ ಬ್ಯಾಂಕ್ ನ ಕಳವು ಪ್ರಕರಣದ ಆರೋಪಿಯಾಗಿದ್ದು ಮಾರ್ಚ್ 25 ರಂದು ಕಾಸರಗೋಡಿನಿಂದ ಅಜಯ್ ಬಾಬುನನ್ನು ಕಣ್ಣೂರು ಸೆಂಟ್ರಲ್ ಜೈಲಿಗೆ ಸ್ಥಳಾಂತರಿಸಲಾಗಿತ್ತು.
ಕೊರೊನಾ ವೈರಸ್ ಸೋಂಕಿತ ವಲಯವಾಗಿರುವ ಕಾಸರಗೋಡಿನಿಂದ ಕರೆತರಲಾದ ಕೈದಿಯನ್ನು ಜೈಲಿನ ನಿಗಾ ವಲಯಕ್ಕೆ ಸ್ಥಳಾಂತರಿಸಲಾಗಿತ್ತು. ಕೇಂದ್ರದ ವೆಂಟಿಲೇಷನ್ ಮುರಿದು ಅಜಯ್ ಬಾಬು ಪರಾರಿಯಾಗಿದ್ದು ಪೊಲೀಸರು ಈತನಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.