ಮಂಗಳೂರು, ಎ.03 (Daijiworld News/MB) : ಕೊರೊನಾ ಲಾಕ್ಡೌನ್ ಇರುವ ಹಿನ್ನಲೆಯಲ್ಲಿ ದ.ಕ. ಜಿಲ್ಲಾಡಳಿತ ಎರಡು ದಿನಗಳ ಹಿಂದೆ, ಮಂಗಳೂರಿನ ಸೆಂಟ್ರಲ್ ಮಾರುಕಟ್ಟೆಯಲ್ಲಿ ರಾತ್ರಿ 11ರಿಂದ 4 ಗಂಟೆಯವರೆಗೆ ಸಗಟು ವ್ಯಾಪಾರಸ್ಥರು ರಿಟೇಲ್ ವ್ಯಾಪಾರಸ್ಥರಿಗೆ ತರಕಾರಿ ಹಾಗೂ ಹಣ್ಣು ಹಂಪಲು ಮಾರಾಟಕ್ಕೆ ಅವಕಾಶವನ್ನು ನೀಡಿತ್ತು. ಆದರೆ ಬುಧವಾರ ಸೆಂಟ್ರಲ್ ಮಾರುಕಟ್ಟೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಜನರು ವ್ಯಾಪಾರಕ್ಕಾಗಿ ಸೇರಿದ ಕಾರಣದಿಂದಾಗಿ ಮುಂಜಾಗೃತಾ ಕ್ರಮವಾಗಿ ಗುರುವಾರ ಜಿಲ್ಲಾಧಿಕಾರಿ ಹಣ್ಣು ಹಾಗೂ ತರಕಾರಿ ಸಗಟು ವ್ಯಾಪಾರವನ್ನು ಬೈಕಂಪಾಡಿಯ ಎಪಿಎಂಸಿಗೆ ಸ್ಥಳಾಂತರಿಸಿ ಆದೇಶಿಸಿದ್ದರು. ಆದರೆ ಇಂದು ಸಗಟು ವ್ಯಾಪಾರಸ್ಥರು ಅಲ್ಲಿ ಯಾವುದೇ ವ್ಯಾಪಾರ ವ್ಯವಹಾರವನ್ನು ಪ್ರಾರಂಭಿಸಿಲ್ಲ.
ಬೈಕಂಪಾಡಿಯ ಎಪಿಎಂಸಿಯಲ್ಲಿ ಯಾವುದೇ ವ್ಯವಸ್ಥೆ ಇಲ್ಲದ ಕಾರಣದಿಂದಾಗಿ ಹಾಗೂ ಆ ಪ್ರದೇಶ ನಗರಕ್ಕೆ ಬಹಳಷ್ಟು ದೂರವಿರುವ ಹಿನ್ನಲೆಯಲ್ಲಿ ಅಲ್ಲಿಗೆ ರಿಟೇಲ್ ವ್ಯಾಪಾರಸ್ಥರು ಬರಲಾರರು ಎಂದು ಸಗಟು ವ್ಯಾಪಾರಸ್ಥರು ಬೈಕಂಪಾಡಿಯ ಎಪಿಎಂಸಿಯಲ್ಲಿ ವ್ಯಾಪಾರವನ್ನು ಆರಂಭ ಮಾಡಿಲ್ಲ.
ಈ ಬಗ್ಗೆ ಮಾಧ್ಯಮವೊಂದರ ಪ್ರತಿನಿಧಿಯ ಕರೆಗೆ ಪ್ರತಿಕ್ರಿಯೆ ನೀಡಿರುವ ಸೆಂಟ್ರಲ್ ಮಾರುಕಟ್ಟೆ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಮುಹಮ್ಮದ್ ಕುಂಞಿ, "ಎಪಿಎಂಸಿಗೆ ನಮ್ಮ ವ್ಯಾಪಾರವನ್ನು ಸ್ದಳಾಂತರಿಸುವ ಯೋಚನೆ ಇಲ್ಲ. ಸದ್ಯ ನಾವು ಅಲ್ಲಿಗೆ ಹೋಗುವುದಿಲ್ಲ ಎಂದು ತೀರ್ಮಾನ ಮಾಡಿದ್ದೇವೆ. ಈ ಬಗ್ಗೆ ಇಂದು ಸ್ಥಳೀಯ ಶಾಸಕರನ್ನು ಸೇರಿ ಸಭೆ ನಡೆಯಲಿದೆ. ಸದ್ಯ ಸಗಟು ವ್ಯಾಪಾರಸ್ಥರು ಅಲ್ಲಿಗೆ ಸ್ಥಳಾಂತರ ಮಾಡದೆ ಪ್ರಧಾನಿ ಮೋದಿ ಕರೆಯಂತೆ ಕೊರೊನಾ ನಿಯಂತ್ರಣಕ್ಕಾಗಿ ನಾವು ಕೂಡಾ ವ್ಯಾಪಾರವನ್ನೇ ನಿಲ್ಲಿಸಿ ಎ. 14 ರವರೆಗೆ ಮನೆಯಲ್ಲೇ ಇರಲು ತೀರ್ಮಾನ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಈ ಕುರಿತಾಗಿ ಸಭೆಯಲ್ಲಿ ಆಗುವ ತೀರ್ಮಾನದಂತೆ ನಾವು ಮುಂದಿನ ಕ್ರಮಕೈಗೊಳ್ಳುತ್ತೇವೆ. ರಿಟೇಲ್ ವ್ಯಾಪಾರಸ್ಥರು ಮಂಗಳೂರಿನಿಂದ ಬೈಕಂಪಾಡಿಗೆ ಬರಲು ಒಪ್ಪುವುದಿಲ್ಲ. ಅದು ಬಹಳ ದೂರವಿದ್ದು ಅಲ್ಲಿಗೆ ಅವರು ಬರುವುದಿಲ್ಲ. ಈಗಾಗಲೇ ಈ ಕುರಿತಾಗಿ ಸಂಬಂಧಪಟ್ಟವರಿಗೆ ತಿಳಿಸಲಾಗಿದೆ ಎಂದಿದ್ದಾರೆ.
ಎಪಿಎಂಸಿಗೆ ವ್ಯಾಪಾರವನ್ನು ಈ ಹಿಂದೆಯೂ ಸ್ಥಳಾಂತರ ಮಾಡಲು ನಿರ್ಧಾರ ಮಾಡಲಾಗಿತ್ತು. ಆ ಸಂದರ್ಭದಲ್ಲೂ ನಾವು ಅದಕ್ಕೆ ಒಪ್ಪಿಗೆ ಸೂಚಿಸಿರಲಿಲ್ಲ. ಅದು ಕೈಗಾರಿಕಾ ವಲಯವಾಗಿದ್ದು ಅದು ಹಣ್ಣು, ತರಕಾರಿಗಳು ತಾಜಾವಾಗಿ ಇರಲು ಸೂಕ್ತವಾದ ಪ್ರದೇಶವಲ್ಲ. ಆ ಹಿನ್ನಲೆಯಲ್ಲಿ ನಾವು ನಮ್ಮ ಕಾರ್ಯವನ್ನೇ ನಿಲ್ಲಿಸುವುದಾಗಿ ತಿಳಿಸಿದ್ದೇವೆ ಎಂದು ತಿಳಿಸಿದ್ದಾರೆ.
ಇದ್ದ ಹಣ್ಣು, ತರಕಾರಿಗಳನ್ನು ಈಗಾಗಲೇ ವ್ಯಾಪಾರ ಮಾಡಲಾಗಿದೆ. ರಿಟೇಲ್ ವ್ಯಾಪಾರಸ್ಥರು ಅದನ್ನು ಜನರಿಗೆ ತಲುಪಿಸಿದ್ದಾರೆ ಎಂಬುದು ನಮ್ಮ ಅನಿಸಿಕೆ ಎಂದು ಹೇಳಿದ್ದಾರೆ.