ಮಂಗಳೂರು, ಎ.04 (DaijiworldNews/PY) : ಮಂಗಳೂರಿನ ವೈದ್ಯ ವಿದ್ಯಾರ್ಥಿನಿಯೋರ್ವಳು ತನಗೆ ಮೊಟ್ಟೆ ಮತ್ತು ಮ್ಯಾಗಿಯ ಅಗತ್ಯವಿದೆ, ಕಳುಹಿಸಿಕೊಡಿ ಎಂಬುದಾಗಿ ಪ್ರಧಾನಮಂತ್ರಿ ಕಚೇರಿ (ಪಿಎಂಒ)ಗೆ ಟ್ವೀಟ್ ಮಾಡುವ ಮೂಲಕ ಮನವಿ ಮಾಡಿಕೊಂಡಿದ್ದಾಳೆ.
ಸಾಂದರ್ಭಿಕ ಚಿತ್ರ
ಆಶ್ಚರ್ಯವೇನೆಂದೆರೆ, ಆಕೆ ಮನವಿ ಮಾಡಿದ ಕೇವಲ ಅರ್ಧ ಗಂಟೆಯಲ್ಲಿ ವಿದ್ಯಾರ್ಥಿಗೆ ಮೊಟ್ಟೆ ಹಾಗೂ ಮ್ಯಾಗಿಯನ್ನು ಪೂರೈಸಿದ್ದಾರೆ.
ಉತ್ತರ ಭಾರತ ಮೂಲದವಳಾದ ವೈದ್ಯಕೀಯ ವಿದ್ಯಾರ್ಥಿನಿ ಸೌಮ್ಯಾ ಸಿಂಗ್ ಮಂಗಳೂರಿನ ಲೇಡಿಸ್ ಹಾಸ್ಟೆಲ್ನಲ್ಲಿ ನೆಲೆಸಿದ್ದು, ಮಾ.31ರಂದು ಎಲ್ಲಾ ಅಂಗಡಿಗಳನ್ನು ಮುಚ್ಚಲಾಗಿದ್ದ ಸಂದರ್ಭ ಸೌಮ್ಯಾ ಪಿಎಂಒಗೆ ಮ್ಯಾಗಿ ಹಾಗೂ ಮೊಟ್ಟೆ ಸರಬರಾಜು ಮಾಡುವಂತೆ ಟ್ವೀಟ್ ಮೂಲಕ ಕೇಳಿಕೊಂಡಿದ್ದಾಳೆ. ಕರ್ನಾಟಕ ನಗರಾಭಿವೃದ್ಧಿ ವಿಭಾಗದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರು ಈ ಟ್ವೀಟ್ ಅನ್ನು ಗಮನಿಸಿದ್ದು, ಸಂಸದ ನಳಿನ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ಕಾರ್ಯಾಚರಿಸುತ್ತಿದ್ದ ವಾರ್ ರೂಂಗೆ ಮಾಹಿತಿ ನೀಡಿದ್ದಾರೆ.
ಪ್ರದ್ಯುಮ್ನಾ ರಾವ್ ನೇತೃತ್ವದ ತಂಡವು ವಿದ್ಯಾರ್ಥಿನಿಯ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿ ಆಕೆಗೆ ಬೇಕಾದ ವಸ್ತುಗಳ ಬಗ್ಗೆ ತಿಳಿದುಕೊಂಡಿದ್ಧಾರೆ. ವಿದ್ಯಾರ್ಥಿಯು ತನಗೆ ಒಂದು ಡಜನ್ ಮೊಟ್ಟೆ ಹಾಗೂ ಆರು ಪ್ಯಾಕೆಟ್ ಮ್ಯಾಗಿ ಬೇಕೆಂದು ತಿಳಿಸಿದ್ದಾಳೆ. ಅಧಿಕಾರಿಗಳು ಇದಕ್ಕೆ ಸ್ಪಂದಿಸಿದ್ದು, ವಿದ್ಯಾರ್ಥಿನಿಗೆ ಅಗತ್ಯವಾದ ಮೊಟ್ಟೆ ಹಾಗೂ ಮ್ಯಾಗಿಯನ್ನು ಉಚಿತವಾಗಿ ನೀಡಿದ್ದಾರೆ.