ಮಂಗಳೂರು, ಏ 04 (Daijiworld News/MSP): ಆಶಾ ಕಾರ್ಯಕರ್ತರು ತಮ್ಮ ಜೀವದ ಹಂಗನ್ನು ತೊರೆದು ತಮ್ಮ ಹಾಗೂ ಸಮಾಜದ ಆರೋಗ್ಯದ ಸಲುವಾಗಿ ಮನೆ ಮನೆಗೆ ಭೇಟಿ ನೀಡುತ್ತಿದ್ದು. ಅವರೊಂದಿಗೆ ಸೌಜನ್ಯ ಹಾಗೂ ಗೌರವದೊಂದಿಗೆ ಸಹಕರಿಸಬೇಕು. ಯಾವುದೇ ಕಾರಣಕ್ಕೂ ಅವರಿಗೆ ಬೆದರಿಕೆ ನೀಡುವುದಾಗಲಿ, ಹಲ್ಲೆ ಮಾಡುವುದಾಗಲಿ ತಿಳಿದು ಬಂದಲ್ಲಿ ಅಂತವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
ಆಹಾರ ಧಾನ್ಯವನ್ನು ವಲಸೆ ಕಾರ್ಮಿಕರಿಗೆ ಆಹಾರ ಪೂರೈಕೆ ನೀಡುವ ಸಂಬಂಧ ಯಾರಾದರೂ ದೇಣಿಗೆ ನೀಡಲು ಇಚ್ಚಿಸಿದಲ್ಲಿ ದಿನೇಶ್ ಕುಮಾರ್ ಜಿ.ಟಿ.,ಕೆಎ.ಎಸ್., ಆಯುಕ್ತರು, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (9739577979) ರವರನ್ನು ಸಂಪರ್ಕಿಸಬಹುದು ಎಂದು ತಿಳಿಸಿದೆ.
ಸರ್ಕಾರದ ಆದೇಶದಂತೆ ಎಪ್ರಿಲ್ 02 ರಂತೆ ಕೊಳಚೆ ಪ್ರದೇಶದ ನಿವಾಸಿಗಳು ಮತ್ತು ಕೂಲಿಕಾರ್ಮಿಕರ ಕುಟುಂಬಕ್ಕೆ ಉಚಿತವಾದ ಹಾಲನ್ನು ವಿತರಿಸಲು ಪ್ರಾರಂಭಿಸಲಾಗಿದೆ. ಈಗಾಗಲೇ ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿ ಏಪ್ರಿಲ್ 3 ರಂದು ಹಾಲನ್ನು ಸರಬರಾಜು ಮಾಡಲಾಗಿರುತ್ತದೆ. ಆಯಾ ನಗರ ಸ್ಥಳೀಯ ಸಂಸ್ಥೆಯ ಮುಖ್ಯಸ್ಥರು ಕೆ.ಎಂ.ಎಫ್ ಅಧಿಕಾರಿಗಳ ಸಮನ್ವಯದೊಂದಿಗೆ ಹಂಚಿಕೆ ಮಾಡಲಾಗುತ್ತದೆ ಎಂದು ದ.ಕ ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.