ಮಂಗಳೂರು, ಏ 04 (Daijiworld News/MSP): ಮಂಗಳೂರು ನಗರ ದಕ್ಷಿಣ ವಿಧಾನಸಭಾ ವ್ಯಾಪ್ತಿಯಲ್ಲಿರುವ ಕಾರ್ಮಿಕರು ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದ ಜನರಿಗೆ 500 ರೂಪಾಯಿ ಮೌಲ್ಯದ ಆಹಾರ ಪದಾರ್ಥಗಳ ಮೋದಿ ಕಿಟ್`ನ್ನು ಶಾಸಕ ವೇದವ್ಯಾಸ್ ಕಾಮತ್ ಹಾಗೂ ಸಂಸದ ನಳಿನ್ ಕುಮಾರ್ ಅವರು ವಿತರಿಸಿದರು.
ಈ ವೇಳೆ ಮಾತನಾಡಿದ ಶಾಸಕ ಕಾಮತ್, ಪ್ರಾರಂಭದ ಹಂತದಲ್ಲಿ ಪ್ರತಿ ವಾರ್ಡಿಗೆ ಕನಿಷ್ಠ 100 ಮೋದಿ ಕಿಟ್ ವಿತರಿಸಲಾಗುತ್ತದೆ. ಮೊದಲನೇ ಹಂತದಲ್ಲಿ 4000 ಕಿಟ್ ಗಳನ್ನು ಒದಗಿಸುವ ಆಲೋಚನೆ ಇದೆ. ಜಿಲ್ಲಾಡಳಿತದ ಸಹಯೋಗದೊಂದಿಗೆ ಬಡ ಜನರಿಗೆ ಆಹಾರ ಪೂರೈಸಲು ಬದ್ಧರಾಗಿದ್ದೇವೆ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.
ಲಾಕ್ ಡೌನ್`ನಿಂದಾಗಿ ಕೂಲಿ ಕಾರ್ಮಿಕರು, ಆರ್ಥಿಕವಾಗಿ ಹಿಂದುಳಿದ ವರ್ಗದ ಜನರು ಆಹಾರದ ಸಮಸ್ಯೆ ಎದುರಿಸಬಾರದು ಎನ್ನುವ ನಿಟ್ಟಿನಲ್ಲಿ ಸೇವಾ ತಂಡವನ್ನು ರಚಿಸಿದ್ದೇವೆ. ಸ್ಥಳೀಯ ಬಿಜೆಪಿ ಮುಖಂಡರು ಹಾಗೂ ಮಂಗಳೂರು ಮಹಾನಗರ ಪಾಲಿಕೆ ಸದಸ್ಯರನ್ನು ಒಳಗೊಂಡ ತಂಡವು ಸೇವಾ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಳ್ಳಲಿದೆ ಎಂದು ಶಾಸಕರು ತಿಳಿಸಿದ್ದಾರೆ.
ಈ ಸಂಧರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಮಹಾಪೌರ ದಿವಾಕರ್ ಪಾಂಡೇಶ್ವರ, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಪೂರ್ಣಿಮಾ, ಬಿಜೆಪಿ ಮುಖಂಡರಾದ ಸುಧೀರ್ ಶೆಟ್ಟಿ ಕಣ್ಣೂರು, ರವಿಶಂಕರ್ ಮಿಜಾರ್ ಹಾಗೂ ಮುಖಂಡರು ಉಪಸ್ಥಿತರಿದ್ದರು.