ಮಂಗಳೂರು, ಎ.05 (Daijiworld News/MB) : ಲಾಕ್ಡೌನ್ ಆದೇಶ ಉಲ್ಲಂಘಿಸಿ ನಗರದಲ್ಲಿ ಶನಿವಾರ ರಸ್ತೆಗಳಿದ ಸುಮಾರು 211 ವಾಹನಗಳನ್ನು ಮಂಗಳೂರು ನಗರ ಪೊಲೀಸರು ಮುಟ್ಟುಗೋಲು ಹಾಕಿದ್ದಾರೆ. ಹಾಗೆಯೇ ದ.ಕ.ಜಿಲ್ಲಾ ಪೊಲೀಸರು 73 ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಹರ್ಷ ಪಿ.ಎಸ್., ಲಾಕ್ಡೌನ್ ಉಲ್ಲಂಘನೆ ಮಾಡಿದ ನಿಟ್ಟಿನಲ್ಲಿ 211 ವಾಹನಗಳನ್ನು ಮುಟ್ಟುಗೋಲು ಹಾಕಲಾಗಿದೆ. ಇದರಿಂದಾಗಿ ನಾನು ಸಂತೋಷವಾಗಿಲ್ಲ. ನೀವು ಸಂತೋಷವೇ ಎಂದು ಪ್ರಶ್ನಿಸಿದ್ದಾರೆ.
ನಮ್ಮ ದೇಶವಾಸಿಗಳ ಜೀವನದೊಂದಿಗೆ ಆಟವಾಡಬೇಡಿ. ಎಲ್ಲಾ ಸೂಚನೆಗಳನ್ನು ಅನುಸರಿಸಿ. ಕೊರೊನಾ ಸಾಂಕ್ರಾಮಿಕದಿಂದ ನಿಮ್ಮನ್ನು ಉಳಿಸಿ ಮತ್ತು ಇತರರಿಗೆ ಅಪಾಯವನ್ನುಂಟುಮಾಡಬೇಡಿ. ನಿಯಮಗಳನ್ನು ಜಾರಿಗೊಳಿಸಲು ನಾವು ಯಾವುದೇ ಕಾರಣಕ್ಕೂ ಹಿಂಜರಿಯುವುದಿಲ್ಲ. ಮನೆಯಲ್ಲಿಯೇ ಇರಿ ಎಂದು ಬರೆದುಕೊಂಡಿದ್ದಾರೆ.
ವಾಹನಗಳ ಸಂಚಾರಕ್ಕೆ ನಿರ್ಬಂಧವಿದ್ದರೂ ಜಿಲ್ಲೆಯಲ್ಲಿ ಸಾರ್ವಜನಿಕರು ಅನಗತ್ಯವಾಗಿ ವಾಹನಗಳಲ್ಲಿ ಸಂಚರಿಸುತ್ತಿರುವುದು ಸಾಮಾನ್ಯವಾಗಿತ್ತು. ಹೀಗಾಗಿ ಆಂಬ್ಯುಲೆನ್ಸ್ ಸೇವೆ, ತುರ್ತು ಅಗತ್ಯ ಸೇವೆಯ ವಾಹನ ಹೊರತುಪಡಿಸಿ ಎಲ್ಲಾ ಖಾಸಗಿ ವಾಹನಗಳು, ದ್ವಿಚಕ್ರ ವಾಹನಗಳು , ಕಾರುಗಳು ಸೇರಿ ಎಲ್ಲಾ ವಿಧದ ವಾಹನ ಸಂಚಾರದ ಮೇಲೆ ಜಿಲ್ಲಾಡಳಿತ ಏ.2 ರ ಮಧ್ಯಾಹ್ನ 12.30 ರಿಂದ ಏ. 14 ರ ಮಧ್ಯರಾತ್ರಿ ವರೆಗೆಸಂಪೂರ್ಣ ನಿಷೇಧ ಹೇರಿತ್ತು.
ಲಾಕ್ ಡೌನ್ ಆದೇಶ ಉಲ್ಲಂಘಿಸುವವರ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಪೊಲೀಸರು ಈ ಹಿಂದೆ ಎಚ್ಚರಿಕೆ ನೀಡಿದ್ದು ಕಳೆದ ಮೂರು ದಿನಗಳಿಂದ ನಗರದಲ್ಲಿ ನಾಕಬಂದಿ ಏರ್ಪಡಿಸಿ ಬಿಗಿ ತಪಾಸಣೆ ನಡೆಸಲಾಗುತ್ತಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ. ಹರ್ಷ ಪಿ.ಎಸ್. ನಿರ್ದೇಶನದಂತೆ ಡಿಸಿಪಿ ಲಕ್ಷ್ಮೀ ಪ್ರಸಾದ್ ಮತ್ತು ಎಸಿಪಿ ಮಂಜುನಾಥ್ ಶೆಟ್ಟಿ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಲಾಗುತ್ತಿದೆ.