ಮಂಗಳೂರು, ಎ.05 (Daijiworld News/MB) : ಕೊರೊನಾ ಲಾಕ್ಡೌನ್ ಮುಗಿದ ಬಳಿಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುವ ವಾಹನ ಚಾಲಕರಿಗೆ ಟೋಲ್ ಹೆಚ್ಚಳದ ಸಂಕಷ್ಟ ಎದುರಾಗಲಿದೆ.
ಪ್ರತಿವರ್ಷದಂತೆ ಈ ಬಾರಿಯೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ ಹೆಚ್ಚಳ ಮಾಡಿದ್ದು ಇದು ಎ. 1ರಿಂದಲೇ ಜಾರಿಗೆ ಬಂದಿದೆ. ಆದರೆ ಸದ್ಯ ಲಾಕ್ಡೌನ್ ಇರುವ ಕಾರಣದಿಂದಾಗಿ ಟೋಲ್ಗೇಟ್ಗಳಲ್ಲಿ ಶುಲ್ಕ ಸಂಗ್ರಹ ಮಾಡಲಾಗುತ್ತಿಲ್ಲ. ಆದರೆ ಎ. 15 ರ ಬಳಿಕ ಲಾಕ್ಡೌನ್ ಅಂತ್ಯವಾಗಿ ಸಂಚಾರ ಆರಂಭವಾದಲ್ಲಿ ಹೆಚ್ಚಳವಾದ ಟೋಲ್ ಪಾವತಿ ಮಾಡಬೇಕಾಗುತ್ತದೆ.
ಕಾರು, ಜೀಪ್, ವ್ಯಾನ್ ಅಥವಾ ಇತರ ಲಘು ಲಘು ವಾಹನಗಳ ತಿಂಗಳ ಪಾಸ್ನಲ್ಲಿ (20 ಕಿ.ಮೀ. ವ್ಯಾಪ್ತಿ) 10 ರೂ. ಹೆಚ್ಚಳವಾಗಿದೆ. ಹಾಗೆಯೇ ಟ್ರಕ್ಗಳ ಟೋಲ್ ಕೂಡಾ ಹೆಚ್ಚಳವಾಗಲಿದೆ. ಇನ್ನು ಕೆಲವು ವಾಹನಗಳಿಗೆ 5 ರೂ.ಗಳಷ್ಟು ಟೋಲ್ ಹೆಚ್ಚಿಸಲಾಗಿದೆ.
ಎ. 1ರಿಂದ ಪ್ರತಿ ವರ್ಷವೂ ಟೋಲ್ ಹೆಚ್ಚಳವಾಗುತ್ತದೆ. ಹಾಗೆಯೇ ಈ ಬಾರಿಯೂ ಹೆಚ್ಚಳ ಮಾಡಲಾಗಿದ್ದು ಈಗಾಗಲೇ ಕೊರೊನಾ ಲಾಕ್ಡೌನ್ನಿಂದ ಸಂಕಷ್ಟಕ್ಕೆ ಒಳಗಾಗಿರುವ ಜನರಿಗೆ ಟೋಲ್ ಹೆಚ್ಚಳ ಹೊರೆಯಾಗಿ ಪರಿಣಮಿಸಿದೆ.