ಕಾಪು,ಏ 05 (Daijiworld News/MSP): ಸರ್ಕಾರ ವಿಧಿಸಿರುವ ಹೋಮ್ ಕ್ವಾರೈಂಟೈನ್ ಆದೇಶ ಉಲ್ಲಂಘಿಸಿ, ವಿದೇಶದಿಂದ ಮರಳಿದ ಯುವಕನೋರ್ವ ಸ್ನೇಹಿತರೊಂದಿಗೆ ಪಾರ್ಟಿ ಮೋಜು ಮಸ್ತಿ ಎಂದು ಕಾಲಕಳೆದಿದ್ದು, ಇದೀಗ ಆತನಲ್ಲಿ ಕೊರೊನಾ ಸೋಂಕು ದೃಢವಾದ ಬೆನ್ನಲ್ಲೇ ಕಾಪು ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.
ಮಾ.೧೭ ರಂದು ದುಬೈನಿಂದ ಹಿಂತಿರುಗಿದ್ದ ಮೂಡಬೆಟ್ಟು ಮಣಿಪುರ ಗ್ರಾಮದ ರಾಘವೇಂದ್ರ (35) ಎಂಬಾತನಿಗೆ ಜಿಲ್ಲಾಡಳಿತ ಹೋಮ್ ಕ್ವಾರೈಂಟೈನ್ ನಲ್ಲಿರುವಂತೆ ಸೂಚಿಸಿತ್ತು. ಆದರೆ ಆದೇಶ ಉಲ್ಲಂಘಿಸಿದ ಯುವಕ ಮನೆಯ ಹತ್ತಿರದ ಮೈದಾನದಲ್ಲಿ ಸುಮಾರು 27-30 ಜನರೊಂದಿಗೆ ಸೇರಿ ಕ್ರಿಕೆಟ್ ಆಡಿದ್ದಾನೆ. ಮಾತ್ರವಲ್ಲದೆ, ಮಾ.೧೮ರಂದು ಸ್ಥಳೀಯ ಅಂಗಡಿಗೆ ಹೋಗಿ ಸುಮಾರು 10 ನಿಮಿಷಗಳ ಕಾಲ ಅಲ್ಲಿದ್ದು ಸುಮಾರು 06 ಜನ ಸಾರ್ವಜನಿಕರೊಂದಿಗೆ ಸಂಪರ್ಕ ಮಾಡಿ ಬಳಿಕ ದೆಂದೂರುಕಟ್ಟೆ ಸಿಂಡಿಕೇಟ್ ಬ್ಯಾಂಕ್ ನ ಎ.ಟಿ.ಎಮ್. ಭೇಟಿ ನೀಡಿದ್ದು ಮತ್ತೆ ಆರೋಪಿ ದಿನಸಿ ಅಂಗಡಿಗೆ ಭೇಟಿ ನೀಡಿ, ಸಂಜೆ ಮತ್ತೆ ಕ್ರಿಕೆಟ್ ಆಡಿ ನಂತರ ರಾತ್ರಿ 03 ಜನರೊಂದಿಗೆ ಬಾರ್ ಗೆ ತೆರಳಿ 01:30 ಗಂಟೆ ಕಾಲ ಪಾರ್ಟಿ ಮಾಡಿರುವುದು ತಿಳಿದುಬಂದಿದೆ
ಇದಲ್ಲದೆ ಮಾ. 20 ರಿಂದ 24ರವರೆಗೆ ನಾಯಿಗೆ ಚಿಕಿತ್ಸೆ ಕೊಡಿಸಲು ತನ್ನ ಸ್ನೇಹಿತನೊಂದಿಗೆ ಕೊರಂಗ್ರಪಾಡಿ ಪಶು ಆಸ್ಪತ್ರೆಗೆ ಹೋಗಿದ್ದು ಹಾಗೂ ಉಡುಪಿ ರಾಧಾ ಮೆಡಿಕಲ್ ನಲ್ಲಿ ಔಷಧಿ ಖರೀದಿಸಲು ಹೋಗಿದ್ದು ನಂತರ 07 ಜನ ಸ್ನೇಹಿತರೊಂದಿಗೆ ಮನೆಯ ಹತ್ತಿರ ಮೈದಾನದಲ್ಲಿ 2:30 ಗಂಟೆ ಪಾರ್ಟಿ ಮಾಡಿರುತ್ತಾನೆ.
ಮಾ.೨೬ ರಂದು ಆರೋಪಿಗೆ ಕೊರೊನಾ ರೋಗ ಲಕ್ಷಣಗಳು ಕಾಣಿಸಿಕೊಂಡ ಹಿನ್ನಲೆಯಲ್ಲಿ, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಮಾ.29ರಂದು ಕೊರೊನಾ ದೃಢಪಟ್ಟಿದೆ.
ಆರೋಪಿಯು ವಿದೇಶದಿಂದ ಬಂದು ಆಸ್ಪತ್ರೆಗೆ ದಾಖಲಾಗುವವರೆಗೆ ಹೋಮ್ ಕ್ವಾರೈಂಟೈನ್ ಆದೇಶವನ್ನು ಉಲಂಘಿಸಿದ ಹಿನ್ನಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ ಸೂಡ ಅವರು ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.