ಕಾಸರಗೋಡು, ಏ 05 (Daijiworld News/MSP): ಕೊರೊನ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಗಂಭೀರವಾಗಿ ತೆಗೆದುಕೊಂಡಿರುವ ಆರೋಗ್ಯ ಇಲಾಖೆ ಕಾಸರಗೋಡಿಗೆ ವಿಶೇಷ ವೈದ್ಯಕೀಯ ತಂಡವನ್ನು ಕಳುಹಿಸಿದೆ.
ಭಾನುವಾರ ಬೆಳಿಗ್ಗೆ ತಿರುವನಂತಪುರ ದಿಂದ ಹೊರಟಿರುವ ತಂಡವು ಸೋಮವಾರ ಬೆಳಿಗ್ಗೆ ಕಾಸರಗೋಡಿಗೆ ತಲುಪಲಿದೆ. ತಂಡದಲ್ಲಿ ಹತ್ತು ವೈದ್ಯರು , ಹತ್ತು ಮಂದಿ ದಾದಿಯರು ಹಾಗೂ ಐದು ಮಂದಿ ನರ್ಸಿಂಗ್ ಅಸಿಸ್ಟೆಂಟ್ ಗಳಿದ್ದಾರೆ. ಎರಡು ವಾರಗಳ ಕಾಲ ಕಾಸರಗೋಡಿನಲ್ಲಿ ತಂಗಳಿರುವ ತಂಡವು ಕೊರೋನಾ ನಿಯಂತ್ರದ ದೃಷ್ಟಿಯಿಂದ ಸೇವೆ ನೀಡಲಿದೆ.
ಪ್ರಮುಖವಾಗಿ ಪೆರ್ಲ ಉಕ್ಕಿನಡ್ಕದಲ್ಲಿ ನಿರ್ಮಾಣಗೊಂಡಿರುವ ಕಾಸರಗೋಡು ವೈದ್ಯಕೀಯ ಕಾಲೇಜು ಕಟ್ಟಡವನ್ನು ಕೊರೊನಾ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿದ್ದು , ಈ ಆಸ್ಪತ್ರೆಗೆ ಈ ವೈದ್ಯಕೀಯ ತಂಡವನ್ನು ನೇಮಿಸಲಾಗಿದೆ. ಸುಮಾರು 300 ಹಾಸಿಗೆಗಳ ವ್ಯವಸ್ಥೆ ಇಲ್ಲಿ ಮಾಡಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ 141 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಈ ಪೈಕಿ ನಾಲ್ವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಗೊಂಡಿದ್ದಾರೆ. 1325 ಮಂದಿಯ ಸ್ಯಾಂಪಲನ್ನು ತಪಾಸಣೆಗೆ ಕಳುಹಿಸಲಾಗಿದ್ದು 374 ಮಂದಿ ತಪಾಸಣಾ ವರದಿ ಇನ್ನೂ ಬರಬೇಕಿದೆ.