ಬಂಟ್ವಾಳ, ಎ.05 (Daijiworld News/MB) : ತುಂಬೆಯ ವ್ಯಕ್ತಿಯೊಬ್ಬರಲ್ಲಿ ಕೊರೊನಾ ದೃಢಪಟ್ಟ ಕಾರಣದಿಂದಾಗಿ ಕಟ್ಟೆಚ್ಚರ ವಹಿಸಲಾಗಿದೆ. ಗ್ರಾಮಸ್ಥರು ಸಹಕರಿಸಬೇಕು. ಆಶಾ ಕಾರ್ಯಕರ್ತೆಯರು ಪ್ರತಿ ಮನೆಗೂ ಭೇಟಿ ನೀಡಿ ಆರೋಗ್ಯ ಮಾಹಿತಿ ಕೇಳುತ್ತಾರೆ. ಆ ಸಂದರ್ಭದಲ್ಲಿ ಅವರಿಗೆ ಯಾವುದೇ ತೊಂದರೆ ಮಾಡದೆ ಮಾಹಿತಿ ನೀಡಬೇಕು ಎಂದು ಶಾಸಕ ಯು.ಟಿ. ಖಾದರ್ ಮನವಿ ಮಾಡಿದರು.
ಗ್ರಾಮಕ್ಕೆ ತಹಶೀಲ್ದಾರ್, ಪೊಲೀಸರು, ಆರೋಗ್ಯ ಇಲಾಖೆ ಅಧಿಕಾರಿಗಳು ಈಗಾಗಲೇ ಭೇಟಿ ನೀಡಿದ್ದು ಸುಮಾರು 500 ಮನೆಗಳನ್ನು ಕ್ವಾರಂಟೈನ್ ನಲ್ಲಿಡಲಾಗಿದೆ. ಅಂತಹ ಮನೆಗಳಿಗೆ ಅಗತ್ಯವಿರುವ ಆಹಾರ ವಸ್ತುಗಳನ್ನು ಎ. 5 ರಿಂದ ತಲುಪಿಸಲಾಗುವುದು ಎಂದರು.
ಸೋಂಕು ದೃಢಪಟ್ಟವರ ಮನೆಗೆ ಭೇಟಿ ನೀಡಿದವರು, ಅವರು ಬೇರೆ ಮನೆಗಳಿಗೆ ಭೇಟಿ ನೀಡಿದ್ದರೆ ಅಂತಹವರು ಕೂಡ ಸ್ವಯಂಪ್ರೇರಣೆಯಿಂದ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು. ಸಾಮಾಜಿಕ ಅಂತರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಶಾಸಕ ಖಾದರ್ ಹೇಳಿದ್ದಾರೆ.