ಉಳ್ಳಾಲ, ಏ 05 (Daijiworld News/MSP): ಪ್ರಧಾನಿ ಮೋದಿ ಕರೆ ನೀಡಿರುವ ದೀಪ ಹಚ್ಚುವ ಕಾರ್ಯದಲ್ಲಿ ಎಲ್ಲರೂ ಭಾಗವಹಿಸಿ, ನಾನು ಕೂಡ ಇಂದು ಬೆಳಿಗ್ಗೆ ಎರಡು ಕ್ಯಾಂಡಲ್ ತಂದಿರಿಸಿ ಇಟ್ಟುಕೊಂಡಿದ್ದೇನೆ ಎಂದು ಶಾಸಕ ಯು.ಟಿ ಖಾದರ್ ಹೇಳಿದರು.
ಉಳ್ಳಾಲ ನಗರಸಭೆಯಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೊರೊನಾ ವಿರುದ್ಧ ಎಲ್ಲರೂ ಒಗ್ಗಟ್ಟಿನಿಂದ ಒಂದೇ ತಾಯಿ ಮಕ್ಕಳಂತೆ ಹೋರಾಡಬೇಕಿದೆ. ಪ್ರಧಾನಮಂತ್ರಿ ಹೇಳಿರುವ ದೀಪ ಹಚ್ಚುವ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಬೇಕು. ನಾನೂ ಎರಡು ಕ್ಯಾಂಡಲ್ ತಂದಿರಿಸಿ ಕೊಂಡಿದ್ದೇನೆ. ದೀಪ ಹಚ್ಚುವುದರಿಂದ ಕಳೆದುಕೊಳ್ಳುವುದು ಏನೂ ಇಲ್ಲ. ಪ್ರಧಾನಿ ಹೇಳುವಂತೆ ಜನರೂ ಕೇಳುತ್ತಾರೆ.ಆದರೆ ಹಸಿವು ನೀಗಿಸುವ ಕೆಲಸವೂ ಜೊತೆಗೆ ಆಗಬೇಕಿದೆ. ಉಜ್ವಲ ಯೋಜೆ ಇರುವವರಿಗೆ ಮಾತ್ರ ಉಚಿತ ಗ್ಯಾಸ್ ವಿತರಿಸಲಾಗುತ್ತಿದೆ. ಆ ಯೋಜನೆಯಲ್ಲಿ ಮಂಗಳೂರು ಕ್ಷೇತ್ರದಲ್ಲಿ 200 ಮಂದಿ ಕೂಡ ಇಲ್ಲ. ಉಳಿದವರು ಹೆಚ್ಚು ಬೆಲೆ ಕೊಟ್ಟು ಸಿಲಿಂಡರ್ ಪಡೆಯುವಂತಹ ದುಸ್ಥಿತಿ ಇದೆ.
ಮೆಸ್ಕಾಂ ಇಲಾಖೆ ವಿದ್ಯುತ್ ಬಿಲ್ ಪಾವತಿಸುವಂತೆ ಒತ್ತಾಯಿಸುತ್ತಿದೆ. ಬ್ಯಾಂಕ್ ಇಎಂಐ ಪಾವತಿಸುವಂತೆ ಗ್ರಾಹಕರಿಗೆ ನಿರಂತರ ಕರೆಗಳು ಬರುತ್ತಲೇ ಇದೆ. ಇದೆಲ್ಲವನ್ನು ಕೇಂದ್ರ ಸರಕಾರ ಪರಿಗಣಿಸದೆ ಕೇವಲ ಹೇಳಿಕೆಗಳಿಗೆ ಮಾತ್ರ ಸೀಮಿತವಾಗಿದೆ.