ಉಡುಪಿ, ಏ 05 (Daijiworld News/MSP): ಕೊರೋನಾ ವೈರಸ್ ಕಾಯಿಲೆ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರವು ರಾಜ್ಯಾದ್ಯಂತ ಲಾಕ್ಡೌನ್ ಘೋಷಿಸಿದ್ದು, ಅದರಂತೆ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಸಿ.ಆರ್.ಪಿ.ಸಿ ಸೆಕ್ಷನ್ 144(3) ರಂತೆ ನಾಗರೀಕರ ಸಂಚಾರವನ್ನು ನಿರ್ಬಂಧಿಸಿ ಆದೇಶವನ್ನು ಹೊರಡಿಸಲಾಗಿದೆ.
ಜಿಲ್ಲಾಡಳಿತಕ್ಕೆ ದೈನಂದಿನ ದಿನಸಿ/ಅವಶ್ಯಕ ಸಾಮಾಗ್ರಿಗಳನ್ನು ಸ್ವಇಚ್ಛೆಯಿಂದ ನೀಡಬಯಸುವ ದಾನಿಗಳು / ಸಂಘ ಸಂಸ್ಥೆಗಳು/ ಸಾರ್ವಜನಿಕರು ಆಯಾ ತಾಲ್ಲೂಕಿನ ತಹಶೀಲ್ದಾರರಿಗೆ ಬೆಳಗ್ಗೆ 10 ಗಂಟೆಯಿAದ ಮಧ್ಯಾಹ್ನ 1 ಘಂಟೆ ಯವರೆಗೆ ನೀಡಬಹುದು ಎಂದು ಈಗಾಗಲೇ ತಿಳಿಸಲಾಗಿದೆ.
ಆದರೂ ಕೆಲವೊಂದು ವ್ಯಕ್ತಿಗಳು / ಸಂಸ್ಥೆಗಳು ಮನೆ ಮನೆಗೆ ನೇರ ತೆರಳಿ ದೈನಂದಿನ ದಿನಸಿ/ ಅವಶ್ಯಕ ಸಾಮಾಗ್ರಿಗಳನ್ನು ಯಾವುದೇ ಅನುಮತಿ ಇಲ್ಲದೆ ಹಾಗೂ ಯಾವುದೇ ಸಾಮಾಜಿಕ ಅಂತರವನ್ನು ಕಾಪಾಡದೇ ಗುಂಪು ಗುಂಪಾಗಿ ಐದಕ್ಕಿಂತ ಹೆಚ್ಚು ಜನರು ಒಟ್ಟಾಗಿ ತೆರಳಿ ಸಾಮಾಗ್ರಿಗಳನ್ನು ಹಂಚುತ್ತಿರುವ ಬಗ್ಗೆ ಜಿಲ್ಲಾಡಳಿತಕ್ಕೆ ಪದೇ ಪದೇ ದೂರುಗಳು ಬರುತ್ತಿವೆ.
ಇದರಿಂದಾಗಿ ಲಾಕ್ಡೌನ್ / ನಿಷೇಧಾಜ್ಞೆಯ ಉಲ್ಲಂಘನೆಯಾಗುತ್ತದೆ ಅಲ್ಲದೇ ಲಾಕ್ಡೌನ್ ನ ಮೂಲ ಉದ್ದೇಶವೇ ಬುಡಮೇಲಾಗುತ್ತದೆ ಹಾಗೂ ಜಿಲ್ಲೆಯ ಕಾನೂನು ಸುವ್ಯವಸ್ಥೆಗೆ ತೊಂದರೆಯಾಗುತ್ತಿದೆ. ಇಂತಹ ವಿಪತ್ತಿನ ಸಮಯದಲ್ಲಿ ಜಿಲ್ಲೆಯ ಪ್ರಜ್ಞಾವಂತ ನಾಗರಿಕರು ಸಂಘ ಸಂಸ್ಥೆಗಳು ಜಿಲ್ಲಾಡಳಿತದ ಸಲಹೆ ಸೂಚನೆಗಳನ್ನು ಪಾಲಿಸಿ ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಆದುದರಿಂದ , ಸ್ವಇಚ್ಛೆಯಿಂದ ದಿನಸಿ ಸಾಮಾಗ್ರಿ/ ಅವಶ್ಯಕ ಸಾಮಾಗ್ರಿಗಳನ್ನು ನೀಡಬಯಸುವ ದಾನಿಗಳು / ಸಂಘ ಸಂಸ್ಥೆಗಳು/ ಸಾರ್ವಜನಿಕರು ಕಡ್ಡಾಯವಾಗಿ ಸಾಮಾಗ್ರಿಗಳನ್ನು ನೇರವಾಗಿ ವಿತರಣೆ ಮಾಡದೆ ಸಂಬಂಧಪಟ್ಟ ತಾಲ್ಲೂಕಿನ ತಹಶೀಲ್ದಾರರಿಗೆ ಹಸ್ತಾಂತರಿಸುವಂತೆ ಕೋರಲಾಗಿದೆ. ಯಾವುದೇ ಪೂರ್ವಾನುಮತಿ ಇಲ್ಲದೆ ಮನೆ ಮನೆಗೆ ತೆರಳಿ ದಿನಸಿ ಸಾಮಾಗ್ರಿ/ ಅವಶ್ಯಕ ಸಾಮಾಗ್ರಿಗಳನ್ನು ಹಂಚುವುದನ್ನು ನಿಷೇಧಿಸಿದ್ದು, ಉಲ್ಲಂಘನೆ ಮಾಡಿದಲ್ಲಿ ಅಂತಹ ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡು ಸಂಬಂಧಪಟ್ಟವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ ನೀಡಿದ್ದಾರೆ.