ಮಂಗಳೂರು, ಏ 05 (DaijiworldNews/SM): ದ.ಕ. ಜಿಲ್ಲೆಯಲ್ಲಿ ದಾಖಲಾಗಿದ್ದ ಮೊದಲ ಕೊರೊನಾ ಸೋಂಕಿತ ಗುಣಮುಖನಾಗುವ ಮೂಲಕ ಜಿಲ್ಲೆಯ ಜನತೆಯಲ್ಲಿ ಉಂಟಾಗಿದ್ದ ಆತಂಕ ದೂರವಾಗಿದೆ. ಸೋಮವಾರದಂದು ಗುಣಮುಖನಾದ ವ್ಯಕ್ತಿ ಆಸ್ಪತ್ರೆಯಿಂದ ಬಿಡುಗಡೆಹೊಂದಲಿದ್ದಾರೆ.
ದುಬೈನಿಂದ ಬಂದಿದ್ದ 22 ವರ್ಷದ ಭಟ್ಕಳ ಮೂಲದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿತ್ತು. ಮಂಗಳೂರು ವಿಮಾನ ನಿಲ್ದಾಣದ ಮೂಲಕ ಆ ವ್ಯಕ್ತಿ ಮಂಗಳೂರಿಗೆ ಆಗಮಿಸಿದ್ದ.
ಮಾರ್ಚ್ 19ರಂದು ಭಟ್ಕಳ ಮೂಲದ ವ್ಯಕ್ತಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಆಗಮಿಸಿದ್ದ. ವಿಮಾನ ನಿಲ್ದಾಣದಲ್ಲಿ ತಪಾಸಣೆ ಸಂದರ್ಭ ಆತನಲ್ಲಿ ಕೊರೊನಾ ಸೋಂಕು ಲಕ್ಷಣಗಳು ಕಂಡುಬಂದಿತ್ತು. ತಕ್ಷಣ ಆತನನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಬಳಿಕ ಆ ವ್ಯಕ್ತಿಯನ್ನು ದ.ಕ. ಜಿಲ್ಲಾಸ್ಪತ್ರೆಯಾಗಿರುವ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಅಲ್ಲದೆ, ಗಂಟಲ ದ್ರವ ಸಂಗ್ರಹಿಸಿ ಪರೀಕ್ಷೆಗೆ ರವಾನಿಸಲಾಗಿತ್ತು. ಪರೀಕ್ಷಾ ವರದಿ ಕೈ ಸೇರಿದ ಸಂದರ್ಭದಲ್ಲಿ ಆತನಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಇದು ಜಿಲ್ಲೆಯಲ್ಲಿ ದಾಖಲಾಗಿದ್ದ ಮೊದಲ ಪ್ರಕರಣವಾಗಿತ್ತು. ಇದರಿಂದಾಗಿ ಇಡೀ ಜಿಲ್ಲೆಯ ಜನತೆ ಆತಂಕಕ್ಕೀಡಾಗಿದ್ದರು. ಬಳಿಕ ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆ ಮುಂದುವರೆಸಲಾಗಿತ್ತು.
ಚಿಕಿತ್ಸೆಗೆ ಯುವಕ ಸ್ಪಂಧಿಸುತ್ತಿದ್ದಂತೆ ಏಪ್ರಿಲ್ 2 ಹಾಗೂ 3ರಂದು ಮತ್ತೊಮ್ಮೆ ಗಂಟಲ ದ್ರವವನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಆ ಎರಡೂ ಪರೀಕ್ಷಾ ಮಾದರಿಗಳು ನೆಗೆಟಿವ್ ವರದಿಯನ್ನು ನೀಡಿವೆ. ಈ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ದಾಖಲಾದ ಮೊದಲ ಸೋಂಕಿತ ಗುಣಮುಖನಾದಂತಾಗಿದೆ. ಏಪ್ರಿಲ್ 06ರಂದು ಗುಣಮುಖನಾದ ವ್ಯಕ್ತಿಯನ್ನು ಡಿಸ್ಚಾರ್ಜ್ ಮಾಡಲಾಗುವುದೆಂದು, ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.