ಲೋಹಿತ್ ಕುಮಾರ್, ಕಲ್ಮಂಜ
ಮಂಗಳೂರು, ಏ 05 (DaijiworldNews/SM): ಕೊರೊನಾ ಮಹಾಮಾರಿಯ ಮುಂದೆ ಜಗತ್ತೆ ಶರಣಾಗಿದೆ. ಇದೀಗ ಕೊರೊನಾದಿಂದಾಗಿ ಜನತೆ ಕಂಗಾಲಾಗಿದ್ದಾರೆ. ಸಾಕಷ್ಟು ಜನತೆ ಸರಿಯಾದ ಅಗತ್ಯ ವಸ್ತುಗಳು ಸಿಗದೆ ಪರದಾಡುವಂತಾಗಿದೆ. ಕಷ್ಟದಲ್ಲಿರುವವರಿಗೆ ನೆರವಾಗುವ ನಿಟ್ಟಿನಲ್ಲಿ ದೈಜಿವರ್ಲ್ಡ್ ಸಂಸ್ಥೆ ಆರಂಭಿಸಿದ್ದ ಅಭಿಯಾನಕ್ಕೆ ಸಹೃದಯ ದಾನಿಗಳ ಮಹಾಪೂರವೇ ಕೈಜೋಡಿಸಿದೆ.
ವಿಜಯ ಗೇಮ್ಸ್ ಟೀಮ್ (ರಿ) ಪಂಡಿತ್ ಹೌಸ್ ಪೆರ್ಮನ್ನೂರು ಸಂಘಟನೆ ದೈಜಿವರ್ಲ್ಡ್ ವಾಹಿನಿಯ ಅಬಿಯಾನಕ್ಕೆ ಕೈ ಜೋಡಿಸಿದೆ. ದಿನಾಂಕ 03-04-2020 ಶುಕ್ರವಾರದಂದು ದಾಯ್ಜಿವರ್ಲ್ಡ್ ವಾಹಿನಿ ಇಡೀ ದಿನ ನೇರ ಪ್ರಸಾರ ಮುಖಾಂತರ ಅಭಿಯಾನ ನಡೆಸಿತ್ತು. ಕೊರೊನಾ ಮಹಾಮಾರಿಯಿಂದ ರಕ್ಷಣೆಗಾಗಿ ವಿಧಿಸಲಾಗಿರುವ ಲಾಕ್ ಡೌನಿಂದಾಗಿ ನೊಂದ ಬಡ ಜೀವಗಳಿಗೆ ನೆರವಾಗುವ ನಿಟ್ಟಿನಲ್ಲಿ ಸಂಸ್ಥೆ ವೈಶಿಷ್ಟ್ಯ ಕಾರ್ಯಕ್ಕೆ ಕೈಹಾಕಿತ್ತು. ವೀಕ್ಷಕ ವರ್ಗ ಕಷ್ಟದಲ್ಲಿರುವ ಅನೇಕ ಜನತೆ ನೆರವಿಗಾಗಿ ಮನವಿ ಮಾಡಿಕೊಂಡಿದ್ದರು.
ಅಂತಹ ಅಹವಾಲಿನಲ್ಲಿ ಕುತ್ತಾರು ಪಂಡಿತ್ ಹೌಸ್, ಉಳ್ಳಾಲ, ತೊಕ್ಕೊಟ್ಟು, ಕಲ್ಲಾಪು ಅಸೈಗೋಳಿ, ಫಜೀರ್, ಪಿಲಾರ್, ಬಾಬುಕಟ್ಟೆ, ನಿತ್ಯಾಧರ್ ನಗರದ ಪ್ರದೇಶಗಳ ಜನರೂ ಕೂಡಾ ಅಭಿಯಾನಕ್ಕೆ ಕರೆಮಾಡಿ ತಮ್ಮ ಅಳಲನ್ನು ತೋಡಿಕೊಂಡಿದ್ದರು. ಈ ಬಗ್ಗೆ, ಅಲ್ಲಿನ ನೊಂದ ಜೀವಗಳಿಗೆ ನೆರವು ನೀಡಲು ಸಂಘಟನೆಗಳು ಮುಂದೆಬಂದಿವೆ. ದೈಜಿವರ್ಲ್ಡ್ ಅಭಿಯಾನದ ಜೊತೆಗೆ ಮುಕ್ತ ಮನಸ್ಸಿನಿಂದ ಕೈಜೋಡಿಸಿದ್ದು ವಿಜಯ ಗೇಮ್ಸ್ ಟೀಮ್ (ರಿ) ಪಂಡಿತ್ ಹೌಸ್ ಪೆರ್ಮನ್ನೂರು ಸಂಘಟನೆ.
ವಿಜಯ ಗೇಮ್ಸ್ ಟೀಮ್ (ರಿ) ಪಂಡಿತ್ ಹೌಸ್ ಪೆರ್ಮನ್ನೂರು ಸಂಘಟನೆ ಸುಮಾರು 30ವರ್ಷಗಳ ಹಿಂದೆ ಕಾರ್ಯರೂಪಕ್ಕೆ ಇಳಿದಿದೆ. ಬಳಿಕ ನಿರಂತರವಾಗಿ ಸಾಮಾಜಿಕ, ಧಾರ್ಮಿಕ, ಕ್ರೀಡಾ, ಸಾಂಸ್ಕೃತಿಕ ಕ್ಷೇತ್ರದಲ್ಲಿ ತನ್ನದೇ ಆದಂತಹ ಛಾಪು ಮೂಡಿಸುತ್ತಿದೆ. ಅದರ ಜೊತೆಯಲ್ಲಿ ಯಾವುದೇ ಪ್ರಚಾರವನ್ನೂ ಬಯಸದೇ ನಿಸ್ವಾರ್ಥ ಸೇವೆಯಿಂದ ಸಮಾಜದ ಸೇವೆಗೆ ನಿರಂತರವಾಗಿ ತೊಡಗಿಸಿಕೊಂಡಿದೆ. ತನ್ನ ಕಾರ್ಯರೂಪಕ್ಕೆ ಒಳಪಟ್ಟ ಪ್ರದೇಶದಲ್ಲಿ ಕಳೆದ 30 ವರ್ಷಗಳಿಂದ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮ, ಪ್ರತಿಭೆಗಳಿಗೆ ಸನ್ಮಾನದ ಮೂಲಕ ಪ್ರತಿಭೆಗಳನ್ನು ಗುರುತಿಸಿ ಸಮಾಜಕ್ಕೆ ಅರ್ಪಿಸುತ್ತಿದೆ.
ಬಬ್ಬುಕಟ್ಟೆಯ ಶಾಲೆಯ ಮಕ್ಕಳಿಗೆ ಸನ್ಮಾನ ಕಾರ್ಯಕ್ರಮ, ಅನಾರೋಗ್ಯ ಪೀಡಿತಕ್ಕೊಳಗಾದವರಿಗೆ ಸಹಾಯಹಸ್ತ, ಯಾವುದೇ ಸಮಯದಲ್ಲಿ ತುರ್ತು ರಕ್ತದಾನ, ಅಪಘಾತ ಸಂದರ್ಭ ಸಹಾಯ ಸೇರಿದಂತೆ ತನ್ನೂರಿನ ರಸ್ತೆಯ ರಿಪೇರಿ, ಗ್ರಾಮದ ಅಭಿವೃದ್ಧಿಗೆ ಶ್ರಮದಾನ, ದೇವಸ್ಥಾನಗಳಿಗೆ ಹೊರೆಕಾಣಿಕೆ ಮೂಲಕ ನಿರಂತರವಾಗಿ ಸಮಾಜಸೇವೆಗೈಯ್ಯುತ್ತಿದೆ. ಇಂತಹ ಒಂದು ಸಂಸ್ಥೆ ಇದೀಗ ಭಾರತ ಲಾಕ್ ಡೌನ್ ಹಿನ್ನಲೆಯಲ್ಲಿ ಬಡಜನರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ತನ್ನ ಕಾರ್ಯವ್ಯಾಪ್ತಿಗೆ ಬರುವ ಬಡಜನರಿಗೆ ಸಹಾಯ ಮಾಡುತ್ತಿದೆ. ಈ ಸೇವೆಯು ಕೇವಲ ಇಲ್ಲಿಗೆ ಮುಗಿಯದೆ ನಿರಂತರವಾಗಿ ನಡೆಯಲಿದೆ ಎಂದು ಸಂಘಟನೆಯ ಪ್ರಮುಖರು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ.
ಭಾರತ ಬಂದ್ ಬಳಿಕ ಬಹಳಷ್ಟು ಜನರಿಗೆ ಸಮಸ್ಯೆಗಳು ಎದುರಾಗಿದೆ. ಆಹಾರದ ಕೊರತೆ ಮಾತ್ರವಲ್ಲದೆ ವೈದ್ಯಕೀಯ ಚಿಕಿತ್ಸೆಗಳು ಲಭ್ಯವಾಗದೆ ಕಂಗೆಟ್ಟಿರುವ ಹಿನ್ನಲೆಯಲ್ಲಿ ಜನತೆಗೆ ಒಂದು ಸಹಾಯ ಮಾಡುವ ನಿಟ್ಟಿನಲ್ಲಿ ದೈಜಿವರ್ಲ್ಡ್ ಸಂಸ್ಥೆ ಆರಂಭಿಸಿದ ನಾವು ನಿಮ್ಮೊಂದಿಗೆ ಎಂಬ ಅಭಿಯಾನಕ್ಕೆ ಅಭೂತ ಪೂರ್ವ ಬೆಂಬಲ ಸಿಕ್ಕಿದ್ದು, ನಮ್ಮ ಅಭಿಯಾನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಜನರಿಗೆ ಶೀಘ್ರವಾಗಿ ಕಿಟ್ ವಿತರಣೆಯನ್ನು ವಿಜಯ ಗೇಮ್ಸ್ ಟೀಮ್ (ರಿ) ಪಂಡಿತ್ ಹೌಸ್ ಪೆರ್ಮನ್ನೂರು ಸಂಘಟನೆ ಮಾಡಿದೆ.