ಬಂಟ್ವಾಳ, ಫೆ 28 : ದೇವಸ್ಥಾನಕ್ಕೆ ನಯಾಪೈಸೆ ಕೊಡದವರು ಹಿಂದೂ ಧರ್ಮದ ಬಗ್ಗೆ ಮಾತನಾಡುತ್ತಾರೆ. ಇವರು ಹಿಂದು ಧರ್ಮದ ರಕ್ಷಕರಾಗಲು ಹೇಗೆ ಸಾಧ್ಯ? ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಪ್ರಶ್ನಿಸಿದ್ದಾರೆ.
ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿಯ ಆಶ್ರಯದಲ್ಲಿ ಮಂಗಳವಾರ ಬಿ.ಸಿ.ರೋಡಿನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ "ನಮ್ಮ ಬೂತ್ ನಮ್ಮ ಹೊಣೆ" ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ತಾನು ಮತೀಯವಾದಿಯಲ್ಲ, ಜಾತೀವಾದಿಯೂ ಅಲ್ಲ. ತನ್ನ ಧರ್ಮವನ್ನು ಆಳವಾಗಿ ಪ್ರೀತಿಸುವ ಮೂಲಕ ಇನ್ನೊಂದು ಧರ್ಮವನ್ನು ಗೌರವಿಸುತ್ತೇನೆ. ನಾವು ನಿಜವಾದ ರಾಮಭಕ್ತರು ಎಂದ ಅವರು, ಬಿಜೆಪಿಯವರು ಇನ್ನೊಂದು ಧರ್ಮವನ್ನು ಬೈಯುವ ಮೂಲಕ ಖಾಲಿ ಮತ ಗಳಿಕೆಯ ನಕಲಿ ರಾಮಭಕ್ತರು ಎಂದು ಹೇಳಿದರು. ನನ್ನನ್ನು ತಂದೆ ರಾಮೇಶ್ವರಕ್ಕೆ ಕರೆದೊಯ್ದು ರಮಾನಾಥ ಎಂದು ಹೆಸರಿಟ್ಟಿದ್ದರು. ರಾಮೇಶ್ವರದ ಸಮುದ್ರ ದಂಡೆಯಲ್ಲಿಯೇ ಬರೆಯಿಸಿ ಅಕ್ಷರಾಭ್ಯಾಸ ಮಾಡಿದ್ದರು. ನಾವು ನಿಜವಾದ ರಾಮಭಕ್ತರು. ಇವರೆಲ್ಲ ನಾಟಕದ ರಾಮಭಕ್ತರು. ತೋರಿಕೆಗಾಗಿ ಮತ್ತು ಓಟಿಗಾಗಿರುವ ರಾಮಭಕ್ತರು. ನಾನು ದಿನವೂ ಬೆಳಗ್ಗೆ ಎದ್ದು ರಾಮನ ಸ್ತುತಿ ಮಾಡುತ್ತೇನೆ ಎನ್ನುತ್ತಾ ರಾಮಾಯಣದ ಶ್ಲೋಕ ಹೇಳಿ ಸೇರಿದ್ದವರನ್ನು ದಂಗು ಬಡಿಸಿದ್ರು.
ಕಾಂಗ್ರೆಸ್ ಮೈ ರಿಲಿಜಿಯನ್. ತನ್ನ ಮನೆಯೇ ಕಾಂಗ್ರೆಸ್ ಕಚೇರಿ. ತಾನು ಅಂದು ಸೋತ ದಿನದ ಮರುದಿನವೇ ಕಾಂಗ್ರೆಸ್ ಕಚೇರಿ ಹೋಗಿ, ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದೇನೆ. ತನ್ನ ಸಾಧನೆಯ ಬಗ್ಗೆ ಕಾರ್ಯಕರ್ತರೇ ಜನರಿಗೆ ತಿಳಿಸಬೇಕು ಎಂದರು.
ಜಿಪಂ ಸದಸ್ಯ ಎಂ.ಎಸ್.ಮುಹಮ್ಮದ್ ಮಾತನಾಡಿ, ರಕ್ತ ಕೊಟ್ಟಾದರೂ ರೈ ಯವರನ್ನು ಗೆಲ್ಲಿಸಬೇಕಾಗಿದೆ ಎಂದ ಅವರು, ಪದ್ಮನಾಭ ಕೊಟ್ಟಾರಿಯವರು ಬಿಜೆಪಿಯಲ್ಲಿ ಮೂಲೆಗುಂಪಾಗಿದ್ದಾರೆ. ಜಿಪಂ ಹಾಗೂ ಸೊಸೈಟಿಯಲ್ಲಿ ಸ್ಪರ್ಧಿಸಿ ಆಯ್ತು. ಇನ್ನು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸುವುದೊಂದೇ ಬಾಕಿ ಎಂದು ಲೇವಡಿ ಮಾಡಿದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಸಚಿವ ರೈ ಬಡವರ, ಶೋಷಿತರ, ಅಲ್ಪಸಂಖ್ಯಾತರ ದೊಡ್ಡ ಶಕ್ತಿಯಾಗಿ, ಕ್ಷೇತ್ರದ ಜನತೆಗೆ ರೈ ನೀಡಿದ ಭರವಸೆಗಳನ್ನೆಲ್ಲಾ ಈಡೇರಿಸಿದ್ದಾರೆ. ಅವರನ್ನು ಮತ್ತೆ ಗೆಲ್ಲಿಸಬೇಕು ಎಂದರು.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ನ ಪ್ರ.ಕಾರ್ಯದರ್ಶಿ ಶಾಹುಲ್ ಹಮೀದ್ ಮಾತನಾಡಿ, ಬಿಜೆಪಿಯ ರಾಮನೇ ಬೇರೆ, ಎಲ್ಲರೂ ಪೂಜಿಸುವ ರಾಮನೇ ಬೇರೆ. ಸಂಘರ್ಷವನ್ನು ಹುಟ್ಟು ಹಾಕುವ ನೇತಾರ ಕಲ್ಲಡ್ಕದಲ್ಲಿದ್ದಾರೆ. ಧರ್ಮಧರ್ಮವನ್ನು ವಿಭಜಿಸುವ ಶಕ್ತಿಗೆ ಯಾರೂ ಬೆಂಬಲ ನೀಡಬಾರದು ಎಂದ ಅವರು, ಚುನಾವಣೆಯನ್ನು ಆತ್ಮವಿಶ್ವಾಸದಿಂದ ಗೆಲ್ಲುವ ಶಕ್ತಿ ಕಾಂಗ್ರೆಸಿಗಿದೆ. ಧರ್ಮಸಮನ್ವಯಕ್ಕೆ ಪೂರಕವಾಗಿ ಸಚಿವ ರಮಾನಾಥ ರೈಯವರನ್ನು ಗೆಲ್ಲಿಸಬೇಕು ಎಂದು ಹೇಳಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ಕೇಂದ್ರದ ಬಿಜೆಪಿ ಸರಕಾರದ ಅಂತ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಪಕ್ಷದ ಕಾರ್ಯಕರ್ತರು ನಮ್ಮ ಬೂತ್ ನಮ್ಮ ಹೊಣೆ ಎನ್ನುವ ದೀಕ್ಷೆಯ ಜೊತೆಗೆ ಕಾರ್ಯ ನಿರ್ವಹಿಸೋಣ ಎಂದರು.
ವೇದಿಕೆಯಲ್ಲಿ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ, ಪಕ್ಷದ ಪ್ರಮುಖರಾದ ರಾಜಶೇಖರ್, ಯು.ಕೆ ಮೋನು, ಇಬ್ರಾಹಿಂ ಕೋಡಿಜಾಲ್, ಪದ್ಮಶೇಖರ್ ಜೈನ್, ಮಂಜುಳಾ ಮಾಧವ ಮಾವೆ, ಕೆಪಿಸಿಸಿ ವೀಕ್ಷಕ ರಾಜಶೇಖರ ಕೋಟ್ಯಾನ್, ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯ ಅಡ್ಪಂಗಾಯ, ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಪುರಸಭಾ ಅಧ್ಯಕ್ಷ ರಾಮಕೃಷ್ಣ ಆಳ್ವ, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಕ್ಷೇತ್ರ ಪ್ರಚಾರ ಸಮಿತಿ ಅಧ್ಯಕ್ಷ ಸಂಜೀವ ಪೂಜಾರಿ, ಬಂಟ್ವಾಳ ಬ್ಲಾಕ್ನ ಜಗದೀಶ್ ಕೊಯಿಲ, ಪ್ರಮುಖರಾದ ಪಿಯೂಸ್ ರೋಡ್ರಿಗಸ್, ಟಿ.ಎಸ್.ಅಬ್ದುಲ್ಲ, ಉಮರ್ ಪಜೀರು, ಉಸ್ಮಾನ್ ಕರೋಪಾಡಿ, ಐಡಾ ಸುರೇಶ್, ಮಾಧವ ಮಾವೆ, ರಫೀಕ್ ಪಾಣೆಮಂಗಳೂರು, ಚಂದ್ರಶೇಖರ್ ಪೂಜಾರಿ, ವಾಸುಪೂಜಾರಿ, ವಸಂತಿ ಚಂದಪ್ಪ, ಉಮೇಶ್ ಆಚಾರ್ಯ, ಎಫ್ರಿಯನ್ ಸಿಕ್ವೇರಾ, ಮುಹಮ್ಮದ್ ಶರೀಫ್, ಸಂಪತ್ ಕುಮಾರ್ ಶೆಟ್ಟಿ, ಪರಮೇಶ್ವರ ಮೂಲ್ಯ, ಮುಹಮ್ಮದ್ ನಂದರಬೆಟ್ಟು, ಪದ್ಮನಾಭ ರೈ, ಸುದರ್ಶನ್ ಜೈನ್, ಚಂದ್ರಶೇಖರ ಪೂಜಾರಿ, ಧನಲಕ್ಷ್ಮೀ ಬಂಗೇರ, ಲುಕ್ಮಾನ್, ಆಲ್ಬರ್ಟ್, ರಮಾನಂದ ಸಫಲ್ಯ, ನವೀನ್ ಚಂದ್ರ ಶೆಟ್ಟಿ, ಪ್ರಶಾಂತ್ ಕುಲಾಲ್, ಜಯಂತಿ ಪೂಜಾರಿ, ಜನಾರ್ದನ ಚೆಂಡ್ತಿಮಾರ್, ರಾಜು ಕೋಟ್ಯಾನ್, ರುಸೈದ್, ವಿಜಯ ಕುಮಾರ್ ಕಡೇಶ್ವಾಲ್ಯ, ಹೊನ್ನಯ್ಯ, ಎಂ.ಬಿ.ಅಶ್ರಫ್, ಬಿ.ಕೆ.ಇದಿನಬ್ಬ ಮತ್ತಿತರರು ಉಪಸ್ಥಿತರಿದ್ದರು. ಪಾಣೆಮಂಗಳೂರು ಬ್ಲಾಕ್ನ ಕಾಂಗ್ರೆಸ್ನ ಅಧ್ಯಕ್ಷ ಅಬ್ಬಾಸ್ ಅಲಿ ಸ್ವಾಗತಿಸಿ, ಪಾಣೆಮಂಗಳೂರು ಬ್ಲಾಕ್ನ ಬಾಲಕೃಷ್ಣ ಆಳ್ವ ನಿರೂಪಿಸಿದರು.