ಉಳ್ಳಾಲ,, ಎ.06 (DaijiworldNews/MSP): ನಿಮ್ಮಂಥ ಪಾಪದವರಿಗೆ ಕೊರೊನಾ ಬರುವುದಿಲ್ಲ. ಶ್ರೀಮಂತರಿಗೇ ಮಾತ್ರ ಈವರೆಗೆ ಕೊರೊನಾ ಬಂದಿರೋದು ಅಂತ ಉಳ್ಳಾಲ ನಗರಸಭೆಯಲ್ಲಿ ಪೌರ ಕಾರ್ಮಿಕರಿಗೆ ಶಾಸಕ ಯು.ಟಿ.ಖಾದರ್ ಧೈರ್ಯ ತುಂಬಿದ್ದಾರೆ.
ಉಳ್ಳಾಲ ನಗರಸಭೆಗೆ ಭೇಟಿ ನೀಡಿದ ಸಂದರ್ಭ ಪೌರಕಾರ್ಮಿಕರಿಗೆ ಧೈರ್ಯ ತುಂಬಿದ ಅವರು, ವಿಮಾನ, ಹವಾನಿಯಂತ್ರಿತ ಕೊಠಡಿಗಳಲ್ಲಿ ಇರುವವರಿಗೆ ಮಾತ್ರ ಕೊರೊನಾ ಸೋಂಕು ಬಂದಿದೆ. ಹೆದರದಿರಿ, ಧೈರ್ಯದಿಂದ ಶುಚಿತ್ವದಲ್ಲಿ ಪಾಲ್ಗೊಳ್ಳಿ. ಜಾಗೃತಿ ವಹಿಸಿಕೊಂಡು, ಮಾಸ್ಕ್ ಧರಿಸಿ ಕೆಲಸ ಕಾರ್ಯಗಳಲ್ಲಿ ಭಾಗಿಯಾಗಿ ಎಂದು ಅವರು ಪೌರ ಕಾರ್ಮಿಕರನ್ನು ಆಗಿಂದಾಗ್ಗೆ ಪರೀಕ್ಷೆಗೆ ಒಳಪಡಿಸಲಾಗುವುದು. ಅವರ ಆರೋಗ್ಯ ಸುರಕ್ಷತೆಗಾಗಿ ಮಾಸ್ಕ್ ಮತ್ತು ಗ್ಲೌಸ್ ವಿತರಿಸಲಾಗುತ್ತಿದೆ. ಉಚಿತವಾಗಿ ಊಟ ತಿಂಡಿಯ ವ್ಯವಸ್ಥೆಯನ್ನು ನಗರಸಭೆ ಆಡಳಿತ ಮಾಡಬೇಕಿದೆ. ಒಟ್ಟು ಉಳ್ಳಾಲದಲ್ಲಿ ಇರುವ 45 ಕುಟುಂಬಗಳಿಗೂ ವಿಶೇಷ ಕಿಟ್ ವಿತರಿಸುವ ಯೋಜನೆ ಮಾಡಲಾಗಿದೆ .
ಕಸ ವಿಲೇವಾರಿಗಾಗಿ ಪ್ರತಿ ಮನೆಮಂದಿಗೆ ಎರಡು ಪ್ಲಾಸ್ಟಿಕ್ಗಳನ್ನು ವಿತರಿಸಲಾಗುವುದು. ಮನೆಮಂದಿಗೆ ತಮ್ಮ ಗೇಟುಗಳಲ್ಲಿ ಹಸಿ ಕಸ , ಒಣಕಸವನ್ನು ಪ್ರತ್ಯೇಕವಾಗಿ ಇರಿಸಬೇಕಿದೆ. ಸೋಂಕಿತ ಮನೆಮಂದಿ ಹಳದಿ ಬ್ಯಾಗಿನಲ್ಲಿ ಕಟ್ಟಿಯಿಡಬೇಕು. ಈ ಮೂಲಕ ಪೌರಕಾರ್ಮಿಕರ ಸುರಕ್ಷತೆಯನ್ನು ಕಾಪಾಡುವ ಜೊತೆಗೆ, ಆ ಮನೆಯ ತ್ಯಾಜ್ಯಕ್ಕೆ ಇತರರ ತ್ಯಾಜ್ಯದ ಜತೆಗೆ ಮಿಶ್ರಣ ಮಾಡದೆ ಬೇರೆಯದ್ದೇ ರೀತಿಯಲ್ಲಿ ಕೊಂಡು ಹೋಗಿ ಹಾಕುವ ಕೆಲಸವಾಗಲಿದೆ. ಆರೋಗ್ಯ ಕುರಿತು ಯಾವುದೇ ಸಮಸ್ಯೆಗಳು ಎದುರಾದಲ್ಲಿ ಆಂಬ್ಯುಲೆನ್ಸ್ ಗಾಗಿ 1077, 108 ಹಾಗೂ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ 104 ಸಂಖ್ಯೆಗೆ ಕರೆ ಮಾಡಬಹುದು ಎಂದರು.