ಮಂಗಳೂರು, ಎ.06 (DaijiworldNews/PY) : ದ.ಕ. ಜಿಲ್ಲೆಯಲ್ಲಿ ಪ್ರಪ್ರಥಮ ಕೊರೊನಾ ಸೋಂಕಿತ ಭಟ್ಕಳದ ಯುವಕ ಸಂಪೂರ್ಣ ಗುಣಮುಖರಾಗಿ ಸೋಮವಾರ ಮುಂಜಾನೆ ತನ್ನೂರಿಗೆ ಹಿಂತಿರುಗುವಾಗ ಭಾವುಕನಾಗಿದ್ದು, ತನ್ನನ್ನು ಶುಶ್ರೂಷೆ ಮಾಡಿದ ವೈದ್ಯಕೀಯ ತಂಡಕ್ಕೆ ಭಾವನಾತ್ಮಕವಾಗಿ ಧನ್ಯವಾದ ಸಲ್ಲಿಸಿ ತನ್ನೂರಿಗೆ ಮರಳಿದ್ದಾರೆ.
ಕೊರೊನಾದಿಂದ ಗುಣಮುಖನಾದ ಭಟ್ಕಳದ 22ರ ಹರೆಯದ ಯುವಕ ಸೋಮವಾರ ಬೆಳಗ್ಗೆ ತನ್ನ ಊರಿನತ್ತ ಹೊರಟುನಿಂತ ಸಂದರ್ಭ, ತನಗೆ ಚಿಕಿತ್ಸೆ ನೀಡಿದ ಹಾಗೂ ಎಲ್ಲಾ ಅಗತ್ಯ ಸೌಲಭ್ಯಗಳನ್ನು ಒದಗಿಸಿದ ವೆನ್ಲಾಕ್ ವೈದ್ಯರಿಗೆ, ಸಿಬ್ಬಂದಿಗಳಿಗೆ ಗೌರವಿಸಿದ್ದು, ವೈದ್ಯರ ಬಳಿ ಭಾವುಕನಾಗಿ ನಿಂತು ಗೌರವಿಸಿ ಧನ್ಯವಾದ ಸಲ್ಲಿಸಿದ್ದಾನೆ. .
ತನಗೆ ವೆನ್ಲಾಕ್ನಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಿ, ಅತ್ಯಂತ ಪ್ರೀತಿಯಿಂದ ಆಸ್ಪತ್ರೆಯಲ್ಲಿ ಯಾವುದೇ ಸಮಸ್ಯೆಯಾಗದಂತೆ ಶುಶ್ರೂಷೆ ಮಾಡಿ, ಅತ್ಯುತ್ತಮ ಆಹಾರ ನೀಡಿ ಆರೈಕೆ ಮಾಡಿದ್ದಕ್ಕಾಗಿ ತನ್ನ ಸಂತೋಷವನ್ನು ಹಂಚಿಕೊಂಡಿದ್ದಾನೆ.
"ಕಳೆದೆರಡು ವರ್ಷಗಳಿಂದ ದುಬೈಯಲ್ಲಿ ಬ್ರಾಂಡೆಡ್ ವಾಚ್ ವ್ಯಾಪಾರ ಮಾಡುತ್ತಿದ್ದ ನನಗೆ ಈ ರೋಗ ಹೇಗೆ ಬಂತು ಎಂದು ನಿಖರವಾಗಿ ತಿಳಿದಿಲ್ಲ. ಕೊರೊನಾ ಪಾಸಿಟಿವ್ ಎಂದು ದೃಢಪಟ್ಟ ಬಳಿಕ, ಎಲ್ಲರಿಂದಲೂ ನಾನು ಸಂಪೂರ್ಣ ಅಂತರ ಕಾಯ್ದುಕೊಂಡೆ" ಎಂದು ಗುಣಮುಖ ಯುವಕ ವಿವರಿಸಿದ್ದಾರೆ.
"ಕೊರೊನಾ ವೈರಸ್ ನಮ್ಮ ದೇಹ ಪ್ರವೇಶಿಸುವುದು ಗೊತ್ತಾಗುವ ವೇಳೆ ಹಲವು ದಿನಗಳು ಕಳೆದಿರುತ್ತದೆ. ಹೀಗಾಗಿ ನಮ್ಮ ಓಡಾಟ ನಿಯಂತ್ರಿಸುವುದು ಪ್ರಾಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಲಾಕ್ಡೌನ್ ಜಾರಿ ಮಾಡಿದ್ದು ಸರ್ಕಾರದ ದಿಟ್ಟಹೆಜ್ಜೆಯಾಗಿದ್ದು, ಸರ್ಕಾರದ ನಿರ್ದೇಶನದಂತೆ ಎಲ್ಲರೂ ಮನೆಯೊಳಗೆ ಇರುವುದು ಅಗತ್ಯ. ನಾನು ವಿಮಾನ ನಿಲ್ದಾಣದಿಂದಲೇ ನೇರವಾಗಿ ಆಸ್ಪತ್ರೆಗೆ ದಾಖಲಾಗಿದ್ದ ಕಾರಣ, ಊರಿಗೆ ತೆರಳಿ ಬಳಿಕ ಕುಟುಂಬಸ್ಥರಿಗೆ, ಊರಿನವರಿಗೆ ರೋಗ ಹರಡುವುದು ತಪ್ಪಿತು. ಇದಕ್ಕಾಗಿ ಜಿಲ್ಲಾಡಳಿತಕ್ಕೆ ನಾನು ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು" ಎಂದು ತಿಳಿಸಿದ್ದಾರೆ.
ಕೊರೊನಾ ರೋಗಕ್ಕೆ ಹೆದರುವ ಅಗತ್ಯವಿಲ್ಲ. ಆತ್ಮವಿಶ್ವಾಸ ಮುಖ್ಯವಾಗಿದೆ. ರೋಗಿಯು ಪ್ರತ್ಯೇಕವಾಗಿರುವುದು ಅಗತ್ಯ. ಒಬ್ಬಂಟಿಯಾಗಿರುವುರಿಂದ ಹೆದರುವ ಅಗತ್ಯವಿಲ್ಲ. ಯಾವುದೇ ಕಾರಣಕ್ಕೂ ಆತ್ಮವಿಶ್ವಾಸ ಕಳೆದುಕೊಳ್ಳಬಾರದು., ಸೋಂಕಿನ ವಿರುದ್ದ ಹೋರಾಡಲು ನಮ್ಮಲ್ಲಿ ಧೈರ್ಯ ಮುಖ್ಯವಾಗಿದೆ ಎಂದರು.
ಇದೀಗ ತನ್ನ ಆರೋಗ್ಯ ವೈದ್ಯರ ಚಿಕಿತ್ಸೆ, ದೇವರ ಅನುಗ್ರಹದಿಂದ ಸಾಮಾನ್ಯ ಸ್ಥಿತಿಗೆ ಬಂದಿದೆ. ವೆನ್ಲಾಕ್ ಆಸ್ಪತ್ರೆಯ ವೈದ್ಯರ, ಸಿಬ್ಬಂದಿಗಳ ನಿರಂತರ ಆರೈಕೆ ಪರಿಣಾಮ ನಾನು ಗುಣಮುಖನಾಗುವಂತಾಯಿತು ಎಂದು ಸೋಂಕನ್ನು ಗೆದ್ದು ಬಂದ ಬಗ್ಗೆ ಹೇಳಿದ್ದಾರೆ.
ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಕೊರೊನಾ ಬಗ್ಗೆ ಸಾಕಷ್ಟು ಭಯಭೀತಿ ಮೂಡಿಸುವಂತೆ ಮಾಡಲಾಗುತ್ತಿದೆ ಎಂದು ಯುವಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.