ಲೋಹಿತ್ ಕುಮಾರ್, ಕಲ್ಮಂಜ
ಬೆಳ್ತಂಗಡಿ, ಏ 05 (DaijiworldNews/SM): ಕೊರೊನಾ ನೀಡಿದ ಏಟು ದೇಶವನ್ನೇ ಲಾಕ್ ಡೌನ್ ಆಗುವಂತೆ ಮಾಡಿದೆ. ಆದರೆ, ಬಡಜನರು ಹೊಟ್ಟೆಗಿಲ್ಲದೆ, ನರಳಾಡುವಂತಾಗಿದೆ. ಜನರ ಕಷ್ಟಕ್ಕೆ ಸ್ಪಂದಿಸುವ ಸಲುವಾಗಿ ದೈಜಿವರ್ಲ್ಡ್ ವಾಹಿನಿ ಆರಂಭಿಸಿದ ನಿಮ್ಮೊಂದಿಗೆ ನಾವು ಅಭಿಯಾನಕ್ಕೆ ವಿವಿಧ ಸಂಘಟನೆಗಳು ನೆರವಾಗಿವೆ. ಅದರಲ್ಲೂ, ಬೆಳ್ತಂಗಡಿ ಪ್ರದೇಶದಲ್ಲಿ ಶಾಸಕ ಹರೀಶ್ ಪೂಂಜಾ ಅವರ ಶ್ರಮಿಕ ಕಾರ್ಯಾಲಯ ನಮ್ಮ ಅಭಿಯಾನಕ್ಕೆ ಕೈ ಮಿಲಾಯಿಸಿ, ನೊಂದವರ ಕಣ್ಣೀರು ಒರೆಸುವ ಕಾರ್ಯವನ್ನು ಮಾಡಿದೆ.
ಇಡೀ ದೇಶ ಕೊರೊನಾ ನಿಯಂತ್ರಣಕ್ಕಾಗಿ ಲಾಕ್ ಡೌನ್ ಆದ ಹಿನ್ನಲೆಯಲ್ಲಿ ಜಿಲ್ಲೆಯ ಜನಜೀವನ ಅಸ್ವಸ್ಥಗೊಂಡಿದ್ದು, ಒಪ್ಪೊತ್ತಿನ ಊಟಕ್ಕೂ ಪರದಾಡುವ ಅನೇಕ ಕುಟುಂಬಗಳು ನಮ್ಮಲ್ಲಿ ಅಳಲು ತೋಡಿಕೊಂಡಿವೆ. ಇನ್ನೆಷ್ಟೋ ಕುಟುಂಬಗಳು ವೈದ್ಯಕೀಯ ಸೇವೆ ದೊರೆಯದೆ ಹಣವೂ ಇಲ್ಲದೆ, ಸಂಕಷ್ಟಕ್ಕೆ ಸಿಲುಕಿದ್ದರು.
ಏಪ್ರಿಲ್ 03ರ ಶುಕ್ರವಾರದಂದು ದಾಯ್ಜಿವರ್ಲ್ಡ್ ವಾಹಿನಿ ದಿನವಿಡಿ ನಡೆಸಿದ ನೇರ ಪ್ರಸಾರ ಕಾರ್ಯಕ್ರಮಕ್ಕೆ ಬೆಳ್ತಂಗಡಿ ತಾಲೂಕಿನ ಹಲವು ಕುಟುಂಬಗಳು ತಮ್ಮ ಸಮಸ್ಯೆಗಳನ್ನು ತೋಡಿಕೊಂಡಿದ್ದರು. ಇದಕ್ಕೆ ತಕ್ಷಣ ಸ್ಪಂಧಿಸಿದ ಬೆಳ್ತಂಗಡಿಯ ಶ್ರಮಿಕ ತಂಡ ನೆರವಿಗೆ ಮುಂದೆಬಂದಿದೆ. ನಿಸ್ವಾರ್ಥ ಮನಸ್ಸಿನಿಂದ ನೊಂದ ಜನರಿಗೆ ಸಹಾಯಹಸ್ತ ಚಾಚಲು ಸಂಸ್ಥೆಯ ಅಭಿಯಾನದ ಜೊತೆಗೆ ಕೈ ಜೋಡಿಸಿದೆ.
ಬೆಳ್ತಂಗಡಿ ತಾಲೂಕಿನ ಜನಪ್ರಿಯ ಶಾಸಕರಾದ ಹರೀಶ್ ಪೂಂಜಾ ತನ್ನ ಕಾರ್ಯವ್ಯಾಪ್ತಿಯನ್ನು ನಡೆಸುವುದಕ್ಕಾಗಿ ಸ್ಥಾಪಿಸಿರುವ ಕಾರ್ಯಾಲಯವೇ ಶ್ರಮಿಕ ಕಾರ್ಯಾಲಯ. ಬೆಳ್ತಂಗಡಿ ತಾಲೂಕಿನ ಜನತೆಯ ಸೇವೆಗಾಗಿ 24ಗಂಟೆಯೂ ಲಭ್ಯವಿರುವ ಈ ಕಾರ್ಯಾಲಯ ಬಹಳಷ್ಟು ತುರ್ತು ಸಂದರ್ಭಗಳಲ್ಲಿ ಜನತೆಯ ಸೇವೆಯಲ್ಲಿ ನಿಸ್ವಾರ್ಥತೆಯಿಂದ ತೊಡಗಿಸಿಕೊಂಡಿದೆ. ಅಂದು, ಭೀಕರ ಮಳೆಯಿಂದ ಚಾರ್ಮಾಡಿ ಘಾಟಿಯಲ್ಲಿ ಗುಡ್ಡ ಕುಸಿದು ರಸ್ತೆಗಳು ತಡೆಯಾದಾಗ ಅಲ್ಲಿ ಸಿಲುಕಿದ್ದ ಪ್ರಯಾಣಿಕರಿಗೆ ಆಹಾರದ ವ್ಯವಸ್ಥೆ ಸೇರಿದಂತೆ, ರಸ್ತೆಗೆ ಬಿದ್ದಂತಹ ಮಣ್ಣನ್ನು ತೆರವುಗೊಳಿಸಲು ತಮ್ಮನ್ನು ತಾವು ತೊಡಗಿಸಿಕೊಂಡಿದೆ.
ಕಳೆದ ಮಳೆಗಾಲದಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಉಂಟಾದ ಭೀಕರ ನೈಸರ್ಗಿಕ ವಿಪತ್ತು ಉಂಟಾದಾಗ ಕಾರ್ಯಾಲಯ ವತಿಯಿಂದ 24ಗಂಟೆಯೂ ಕಾರ್ಯಚರಿಸುವಂತೆ ಎರಡು ವಾಹನಗಳನ್ನು ಮೀಸಲಿಡಲಾಗಿತ್ತು. ಜೊತೆಗೆ, ಯುವಪಡೆಯನ್ನು ರಚಿಸಲಾಗಿತ್ತು. ತಾಲೂಕಿನ ಪ್ರತೀ ಮೂಲೆ ಮೂಲೆಗೂ ತೆರಳಿ ವಿಪತ್ತಿನಿಂದ ತೊಂದರೆಗೊಳಗಾದ ವ್ಯಕ್ತಿಗಳಿಗೆ ಸಹಾಯ ಹಸ್ತ ಚಾಚಿದ್ದಾರೆ. ಇಷ್ಟು ಮಾತ್ರವಲ್ಲದೆ, ಯಾವುದೇ ಸಂದರ್ಭದಲ್ಲೂ ಜನರ ಸೇವೆಗಾಗಿ ದಿನದ 24ಗಂಟೆಯೂ ಕಾರ್ಯಚರಿಸುವಂತಹ ಯುವಪಡೆ ಸಿದ್ಧವಾಗಿ ನಿಂತಿರುತ್ತದೆ. ನೈಸರ್ಗಿಕ ವಿಪತ್ತು ಉಂಟಾದಾಗ ಸಂಪೂರ್ಣ ಶ್ರಮಿಕ ಕಾರ್ಯಾಲಯವನ್ನು ಉಗ್ರಾಣ ಮಾಡಿ ಜನತೆಯ ಹಸಿವು ನೀಗಿಸುವಲ್ಲಿ ಮಾತ್ರವಲ್ಲದೆ, ಅಗತ್ಯ ಸಾಮಾಗ್ರಿ ವಿತರಿಸುವಲ್ಲಿ ಶ್ರಮಿಕ ಕಾರ್ಯಾಲಯದ ಯುವಪಡೆ ಶಾಸಕ ಹರೀಶ್ ಪೂಂಜಾರ ನೇತೃತ್ವದಲ್ಲಿ ತೊಡಗಿಸಿಕೊಂಡಿತ್ತು. ಇದೀಗ, ಭಾರತ ಲಾಕ್ ಡೌನ್ ಹಿನ್ನಲೆಯಲ್ಲಿ ತಾಲೂಕಿನ ಜನತೆಗೆ ನಿರಂತರ ಆಹಾರ ಸಾಮಾಗ್ರಿಗಳನ್ನು ನೀಡುತ್ತಿದ್ದಾರೆ.
ಭಾರತ ಬಂದ್ ಬಳಿಕ ಬಹಳಷ್ಟು ಜನರಿಗೆ ಸಮಸ್ಯೆಗಳು ಎದುರಾಗಿದೆ. ಆಹಾರದ ಕೊರತೆ ಮಾತ್ರವಲ್ಲದೆ ವೈದ್ಯಕೀಯ ಚಿಕಿತ್ಸೆಗಳು ಲಭ್ಯವಾಗದೆ ಕಂಗೆಟ್ಟಿರುವ ಹಿನ್ನಲೆಯಲ್ಲಿ ಜನತೆಗೆ ಒಂದು ಸಹಾಯ ಮಾಡುವ ನಿಟ್ಟಿನಲ್ಲಿ ದೈಜಿವರ್ಲ್ಡ್ ಸಂಸ್ಥೆ ಆರಂಭಿಸಿದ ನಾವು ನಿಮ್ಮೊಂದಿಗೆ ಎಂಬ ಅಭಿಯಾನಕ್ಕೆ ಅಭೂತ ಪೂರ್ವ ಬೆಂಬಲ ಸಿಕ್ಕಿದ್ದು, ನಮ್ಮ ಅಭಿಯಾನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಜನರಿಗೆ ಶೀಘ್ರವಾಗಿ ಕಿಟ್ ವಿತರಣೆಯನ್ನು ಶ್ರಮಿಕ ಕಾರ್ಯಾಲಯವು ಮಾಡಿದೆ.