ಕಾಸರಗೋಡು, ಏ 06 (DaijiworldNews/SM): ಕಾಸರಗೋಡಿನಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಸೋಮವಾರ ಮತ್ತೆ 9 ಮಂದಿಯಲ್ಲಿ ಸೋಂಕು ದ್ರಢಪಡುವ ಮೂಲಕ ಸೋಂಕಿತರ ಸಂಖ್ಯೆ ನಿರಂತರ ಏರಿಕೆಯಾಗುತ್ತಿದ್ದು, ಆತಂಕ ಹೆಚ್ಚಾಗುತ್ತಿದೆ.
ಆದಿತ್ಯವಾರ ಓರ್ವನಲ್ಲಿ ಸೋಂಕು ಪತ್ತೆಯಾಗಿತ್ತು. ಆದರೆ, ಸೋಮವಾರ ಒಂಭತ್ತು ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. 9 ಮಂದಿಯಲ್ಲಿ ಆರು ಮಂದಿ ವಿದೇಶದಿಂದ ಬಂದವರಾಗಿದ್ದಾರೆ. ಉಳಿದವರು ಸೋಂಕಿತರ ಸಂಪರ್ಕದಿಂದ ಬಂದವರಾಗಿದ್ದಾರೆ. ಆರು ಪುರುಷರು, ಮೂವರು ಮಹಿಳೆಯರಾಗಿದ್ದಾರೆ.
ಮೊಗ್ರಾಲ್ ಪುತ್ತೂರಿನ ಓರ್ವ, ಚೆಂಗಳದ ನಾಲ್ವರು, ಕಾಸರಗೋಡು ನಗರ ವ್ಯಾಪ್ತಿಯ ಓರ್ವ ಇದರಲ್ಲಿ ಒಳಗೊಂಡಿದ್ದಾರೆ. ಇದುವರೆಗೆ 1769 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. ಸೋಮವಾರ 102 ಮಂದಿಯ ಸ್ಯಾಂಪಲ್ ಕಳುಹಿಸಲಾಗಿದೆ. ಇದುವರೆಗೆ 1084 ಮಂದಿಯ ಫಲಿತಾಂಶ ಲಭಿಸಿದೆ.
151 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. 685 ಮಂದಿಯ ಫಲಿತಾಂಶ ಲಭಿಸಿಬೇಕಿದೆ. ಜಿಲ್ಲೆಯಲ್ಲಿ 10,844 ಮಂದಿ ನಿಗಾದಲ್ಲಿದ್ದಾರೆ. ಇವರಲ್ಲಿ 10623 ಮಂದಿ ಮನೆಗಳಲ್ಲಿ, 221 ಮಂದಿ ಆಸ್ಪತ್ರೆಗಳಲ್ಲಿ ನಿಗಾದಲ್ಲಿದ್ದಾರೆ. ನೂತನವಾಗಿ 16 ಮಂದಿ ಐಸೊಲೇಷನ್ ವಾರ್ಡ್ ಗೆ ವರ್ಗಾಯಿಸಲಾಗಿದೆ. 27 ಮಂದಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ.