ವಿಟ್ಲ, ಏ 06 (DaijiworldNews/SM): ಕೊರೊನ್ ಲಾಕ್ ಡೌನ್ ಹಿನ್ನೆಲೆ ದೇಶದಲ್ಲಿ ಕೊರೊನಾ ಮಹಾಮಾರಿಯನ್ನು ನಿಯಂತ್ರಿಸಲು ಹಲವಾರು ಜನರ ಹೋರಾಡುತ್ತಿದ್ದಾರೆ. ತಮ್ಮ ಜೀವದ ಹಂಗು ತೊರೆದು ಜನರ ರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪೊಲೀಸರು ಜನರ ಒಳಿತಿಗಾಗಿ ಲಾಠಿ ಬೀಸಿದರೆ, ಅವರ ವಿರುದ್ಧ ಮೂಗು ಮುರಿದುಕೊಳ್ಳುವವರೇ ಹೆಚ್ಚು. ಆದರೆ, ಅದೆಷ್ಟೋ ಪೊಲೀಸರು ತಮ್ಮ ಕುಟುಂಬದಿಂದ ದೂರವಾಗಿ, ಜನಜೀವನ ಇಲ್ಲದ ಪ್ರದೇಶದಲ್ಲಿ ಕಾವಲು ಕಾಯುತ್ತಿರುವುದು ಯಾರ ಗಮನಕ್ಕೂ ಬರುತ್ತಿಲ್ಲ.
ದೇಶದೆಲ್ಲೆಡೆ ಲಾಕ್ ಡೌನ್ ಆದೇಶದ ಬಳಿಕ ಗಡಿ ಪ್ರದೇಶಗಳಲ್ಲಿ ಪೊಲೀಸರು ಸರ್ಪಗಾವಲಿನಲ್ಲಿದ್ದಾರೆ. ಕಾಸರಗೋಡಿನಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇರಳ-ಕರ್ನಾಟಕ ಗಡಿ ಭಾಗಗಳನ್ನು ಬಂದ್ ಮಾಡಲಾಗಿದೆ. ದ.ಕ. ಜಿಲ್ಲೆಯ ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ಗಡಿ ಭಾಗಗಳಿದ್ದು, ಎರಡು ರಾಜ್ಯಗಳ ನಡುವಿನ ಸಂಪರ್ಕ ಕೊಂಡಿಗಳಾಗಿವೆ. ಈ ಭಾಗಗಳಲ್ಲಿ ಜನರ ನಿಯಂತ್ರಣಕ್ಕೆ ಚೆಕ್ ಪೋಸ್ಟ್ ಗಳನ್ನು ನಿರ್ಮಿಸಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಆದರೆ, ಅದೆಷ್ಟೋ ಕಡೆಗಳಲ್ಲಿ ಪೊಲೀಸರಿಗೆ ಅಗತ್ಯ ಸೇವೆಯೇ ಲಭ್ಯವಾಗುತ್ತಿಲ್ಲ.
ದ.ಕ. ಜಿಲ್ಲೆಯ ಮಾಣಿಲ ಗ್ರಾಮದಲ್ಲಿ ಕೇರಳ ಸಂಪರ್ಕಕ್ಕೆ ಹಲವು ರಸ್ತೆಗಳಿವೆ. ಈ ರಸ್ತೆಗಳ ಮೂಲಕ ಕರ್ನಾಟಕಕ್ಕೆ ಕೇರಳಿಗರು ಆಗಮಿಸುತ್ತಾರೆ. ಇದೇ ಕಾರಣದಿಂದ ಪೊಲೀಸರನ್ನು ನಿಯೋಜನೆ ಮಾಡಿ ನಿಯಂತ್ರಣ ಮಾಡಲಾಗುತ್ತಿದೆ. ಆದರೆ, ಮಾಣಿಲ ಗ್ರಾಮದ ಓಟೆಪಡ್ಪು ರಸ್ತೆಯಲ್ಲಿ ನಿರ್ಮಿಸಲಾಗಿರುವ ಚೆಕ್ ಪೋಸ್ಟ್ ನಲ್ಲಿ ಮೂರರಿಂದ ನಾಲ್ಕು ಮಂದಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಆದರೆ, ಚೆಕ್ ಪೋಸ್ಟ್ ಬಳಿ ಯಾವುದೇ ವ್ಯವಸ್ಥೆಗಳಿಲ್ಲ. ಕಾಡಿನ ಮಧ್ಯದಲ್ಲಿರುವ ಈ ಚೆಕ್ ಪೋಸ್ಟ್ ಬಳಿ ಉನ್ನಲು ತಿನ್ನಲು ವ್ಯವಸ್ಥೆಗಳಿಲ್ಲ. ಅಂಗಡಿ, ಮಾತ್ರವಲ್ಲದೆ, ಕುಡಿಯಲು ನೀರು ಕೂಡ ಸಿಗುತ್ತಿಲ್ಲ. ಕೂಗಿ ಕರೆಯಲು ಯಾವುದೇ ಮನೆಗಳಿಲ್ಲ. ಹಗಲು ರಾತ್ರಿ ಪೊಲೀಸರು ಈ ಗ್ರಾಮೀಣ ಭಾಗದಲ್ಲಿರುವ ಗುಡ್ಡ ಪ್ರದೇಶದಲ್ಲಿ ದೇಶಕ್ಕಾಗಿ, ಕೊರೊನಾ ನಿಯಂತ್ರಣಕ್ಕಾಗಿ ಕಾವಲು ಕಾಯುತ್ತಿದ್ದಾರೆ.
ಮೊಬೈಲ್ ನೆಟ್ ವರ್ಕ್ ಇಲ್ಲದ ಕಾರಣ ದಿನ ನಿತ್ಯದ ಸುದ್ದಿಗಳ ಬಗ್ಗೆಯೂ ಪೊಲೀಸರಿಗೆ ತಿಳಿಯುವುದಿಲ್ಲ. ರಾತ್ರಿ ವೇಳೆ ಕಾಡು ಪ್ರಾಣಿಗಳ ಭೀತಿಯಿದ್ದು, ಪೊಲೀಸರಿಗೆ ಮಲಗಲು ಸ್ಥಳೀಯ ವ್ಯಕ್ತಿಗಳು ಪಿಕಪ್ ವಾಹನದ ವ್ಯವಸ್ಥೆ ಮಾಡಿದ್ದಾರೆ. ಮತ್ತೊಂದೆಡೆ, ಉನ್ನಲು ತಿನ್ನಲು ಏನೂ ಸಿಗದ ಸಂದರ್ಭ ಸ್ಥಳೀಯ ಸಹೃದಯಿಗಳು ಮೂರು ಹೊತ್ತಿನ ಭೋಜನದ ವ್ಯವಸ್ಥೆಯನ್ನು ಕಲ್ಪಿಸುತ್ತಿದ್ದಾರೆ.
ಪೊಲೀಸರು ಕಾನೂನನ್ನು ನಿಯಂತ್ರಿಸುವ ನಿಟ್ಟಿನಲ್ಲಿ ತಮ್ಮ ಅಧಿಕಾರವನ್ನು ಬಳಸುತ್ತಾರೆ. ಪೊಲೀಸರು ಲಾಠಿ ಬೀಸಿದರು, ದರ್ಪ ತೋರಿದರು, ಕೇಸ್ ಹಾಕಿದರು ಎಂಬ ವಿಚಾರಗಳನ್ನು ಹೈಲೈಟ್ ಮಾಡಿ ಬೇರೆಬೇರೆ ಭಂಗಿಗಳಲ್ಲಿ ವೈರಲ್ ಮಾಡುವವರಿಗೆ, ಇಂತಹ ಪೊಲೀಸರ ನಿಸ್ವಾರ್ಥ ಸೇವೆ ಕಣ್ಣಿಗೆ ಕಾಣಿಸುವುದಿಲ್ಲ. ಹಲವು ದಿನಗಳ ಕಾಲ ಮೂಲಭೂತ ವ್ಯವಸ್ಥೆಗಳಿಲ್ಲದೆ, ಕುಟುಂಬದೊಂದಿಗೆ ಸಂಪರ್ಕವಿಲ್ಲದೆ, ಸೋಂಕು ತಡೆಯುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಎಲ್ಲಾ ಪೊಲೀಸರಿಗೂ ನಮ್ಮದೊಂದು ಸಲಾಂ.