ಮಂಗಳೂರು, ಎ.07 (Daijiworld News/MB) : ವೆನ್ಲಾಕ್ ಆಸ್ಪತ್ರೆಯ ಸೂಪರ್ ಸ್ಪೆಷಾಲಿಟಿ ಬ್ಲಾಕ್ ಕೊರೊನಾ ಸೋಂಕಿತರ ಹಾಗೂ ಶಂಕಿತರ ಚಿಕಿತ್ಸೆಗೆ ಸಿದ್ಧವಾಗಿದೆ.
ವೆನ್ಲಾಕ್ ಕೃತಕ ಅವಯವ ಕೇಂದ್ರ ಬಳಿಯ ಸೂಪರ್ ಸ್ಪೆಷಾಲಿಟಿ ಬ್ಲಾಕ್ ಅನ್ನು ಸಂಪೂರ್ಣವಾಗಿ ಕೋವಿಡ್ ಬ್ಲಾಕ್ ಅನ್ನಾಗಿ ಪರಿವರ್ತನೆ ಮಾಡಲಾಗಿದ್ದು ಸೋಮವಾರ ಹಿರಿಯ ವೈದ್ಯಾಧಿಕಾರಿಗಳ ಉಪಸ್ಥಿತಿಯಲ್ಲಿ ಆಸ್ಪತ್ರೆಗೆ ಬರುವ ಶಂಕಿತ ಅಥವಾ ಸೋಂಕಿತ ರೋಗಿಗಳನ್ನು ಯಾವ ರೀತಿಯಲ್ಲಿ ಉಪಚರಿಸಲಾಗುತ್ತದೆ ಎಂಬುದರ ಪ್ರಾತ್ಯಕ್ಷಿತೆ ನಡೆಸಲಾಯಿತು.
ಸದ್ಯ ಸೋಂಕಿತರು ಹಾಗೂ ಶಂಕಿತ ರೋಗಿಗಳು ಆಸ್ಪತ್ರೆಯ ಆಯುಷ್ ಬ್ಲಾಕ್ನ ನಿಗಾದಲ್ಲಿದ್ದಾರೆ.
ಸೂಪರ್ ಸ್ಪೆಷಾಲಿಟಿ ಬ್ಲಾಕ್ನ ನೂತನ ಕೋವಿಡ್ ಬ್ಲಾಕ್ನ 3 ನೇ ಮಹಡಿಯನ್ನು ಸಂಪೂರ್ಣವಾಗಿ ಕೊರೊನಾ ಶಂಕಿತ ರೋಗಿಗಳ ಚಿಕಿತ್ಸೆಗೆಂದು ಇರಿಸಲಾಗಿದ್ದು ಇಲ್ಲಿ ನಾಲ್ಕು ವಿಭಾಗಗಳಲ್ಲಿ ಒಟ್ಟು 79 ಹಾಸಿಗೆಗಳು ಇವೆ.
ಶಂಕಿತ ರೋಗಿಯ ಗಂಟಲ ದ್ರವ ಸಂಗ್ರಹಕ್ಕೂ ಮಾಡಲು ಪ್ರತ್ಯೇಕ ಕೊಠಡಿಯಿದ್ದು ರೋಗಿಗಳ ಕೊರೊನಾ ವರದಿ ಪಾಸಿಟಿವ್ ಬಂದಲ್ಲಿ ಅವರನ್ನು 2 ನೇ ಮಹಡಿಯಲ್ಲಿರುವ ಪಾಸಿಟಿವ್ ರೋಗಿಗಳ ವಿಭಾಗಕ್ಕೆ ಸ್ಥಳಾಂತರ ಮಾಡಲಾಗುತ್ತದೆ. ಅಲ್ಲಿ ಒಟ್ಟು 99 ಹಾಸಿಗೆಗಳು ಇವೆ.
ಹಾಗೆಯೇ ಪ್ರತಿ ವಿಭಾಗದಲ್ಲೂ ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರು ಹಾಗೂ ಸಿಬಂದಿಗೆ ಡಾನ್ನಿಂಗ್ ಹಾಗೂ ಡಾಪ್ಟಿಂಗ್ ರೂಂ (ರೋಗಿಯ ಬಳಿ ಹೋಗುವಾಗ ಹಾಕಬೇಕಾದ ಉಡುಪುಗಳನ್ನು ಹಾಕುವ ಹಾಗೂ ತೆಗೆಯಲೆಂದಿರುವ ಪ್ರತ್ಯೇಕ ಕೊಠಡಿ) ಗಳು ಇದೆ.
ಇನ್ನು ಸೋಂಕಿಯತರಲ್ಲಿ ಚಿಂತಾಜನಕ ಸ್ಥಿತಿಯಲ್ಲಿ ಇರುವ ರೋಗಿಗಳನ್ನು 1 ನೇ ಮಹಡಿಗೆ ಸ್ಥಳಾಂತರ ಮಾಡಲಾಗುತ್ತದೆ. ಅಲ್ಲಿ 49 ಹಾಸಿಗೆಗಳು ಇವೆ.
ಶಂಕಿತರು ಹಾಗೂ ಸೋಂಕಿತರನ್ನು ಇರಿಸಲಾಗಿರುವ ದ್ವಿತೀಯ ಹಾಗೂ ತೃತೀಯ ಮಹಡಿಗಳಿಗೆ ತೆರಳಬೇಕಾದ್ದಲ್ಲಿ ಪ್ರತ್ಯೇಕ ಲಿಫ್ಟ್ಗಳನ್ನು ಮೀಸಲಿಡಲಾಗಿದೆ.
ಕೊರೊನಾ ಶಂಕಿತರ ಹಾಗೂ ಸೋಂಕಿತರ ಚಿಕಿತ್ಸೆಗಾಗಿ ವೆನ್ಲಾಕ್ ಆಸ್ಪತ್ರೆಯಲ್ಲಿರುವ ಕೆಎಂಸಿಯ 50 ಮಂದಿ, ಎನ್ಎಚ್ಎಂನ 44 ಮಂದಿ ಹಾಗೂ 136 ಸರಕಾರಿ ದಾದಿಯರನ್ನು ಮೀಸಲಿರಿಸಲಾಗುತ್ತದೆ.
ಹಾಗೆಯೇ ಈವರೆಗೆ ಕೊರೊನಾ ಕೊರೊನಾ ವೈರಸ್ ಪತ್ತೆಗೆ ಗಂಟಲ ದ್ರವದ ಮಾದರಿಯನ್ನು ಬೆಂಗಳೂರಿಗೆ ಅಥವಾ ಹಾಸನಕ್ಕೆ ಕಳುಹಿಸಲಾಗುತ್ತಿತ್ತು. ಆದರೆ ಈಗ ವೆನ್ಲಾಕ್ ಆಸ್ಪತ್ರೆಗೆ ಕೊರೊನಾ ವೈರಸ್ ಪತ್ತೆಗೆ ಗಂಟಲ ದ್ರವ ಮಾದರಿ ಪರೀಕ್ಷೆ ನಡೆಸಲು ವೆನ್ಲಾಕ್ ಆಸ್ಪತ್ರೆಗೆ ಮಂಜೂರಾದ ಪ್ರಯೋಗಾಲಯಕ್ಕೆ ಐಸಿಎಂಆರ್ನಿಂದ ಅನುಮತಿ ಲಭಿಸಿದೆ. ಈ ಪ್ರಯೋಗಾಲಯವು ಮೂರು ದಿನಗಳ ಹಿಂದೆಯೇ ಆರಂಭವಾಗಿದ್ದು ಪ್ರಾಯೋಗಿಕವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಇದೀಗ ಅಧಿಕೃತವಾಗಿ ಆರಂಭವಾಗುವುದರೊಂದಿಗೆ ರೋಗಿಯ ಗಂಟಲ ದ್ರವದ ಮಾದರಿಯ ಪರೀಕ್ಷಾ ವರದಿಯನ್ನು ಅಂದಂದೇ ಪಡೆಯಬಹುದಾಗಿದೆ.