ಮಂಗಳೂರು, ಏ 07 (DaijiworldNews/SM): ಕಳೆದ ಕೆಲವು ದಿನಗಳಿಂದ ನಿರಂತರ ಚರ್ಚೆಗೆ ಕಾರಣವಾಗಿದ್ದ, ಗಡಿ ಬಂದ್ ವಿಚಾರಕ್ಕೆ ಇದೀಗ ಸ್ವಲ್ಪ ಮಟ್ಟಿಗೆ ತೆರೆ ಬಿದ್ದಿದೆ. ಗಡಿ ಭಾಗಗಳ ಮೂಲಕ ಕರ್ನಾಟಕಕ್ಕೆ ಕೇರಳದ ಆಂಬ್ಯುಲೆನ್ಸ್ ಗಳ ಆಗಮನಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಂತ್ಯಂತ ತುರ್ತು ಚಿಕಿತ್ಸೆಗಳಿಗೆ ಮಾತ್ರವೇ ಅವಕಾಶ ಕಲ್ಪಿಸಲಾಗಿದೆ.
ಆ ಮೂಲಕ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ಹಗ್ಗಜಗ್ಗಾಟಕ್ಕೆ ತೆರೆ ಬಿದ್ದಂತಾಗಿದೆ. ಯಾವುದೇ ಕಾರಣಕ್ಕೂ ಕೊರೊನಾ ಸೋಂಕಿತರಿಗೆ ಮಂಗಳೂರಿಗೆ ಕರೆ ತರಲು ಅವಕಾಶವಿಲ್ಲ. ಸಮರ್ಪಕವಾಗಿ ತಪಾಸಣೆ ನಡೆಸಿದ ಬಳಿಕವಷ್ಟೇ ಕಾಸರಗೋಡಿನ ಆಂಬ್ಯುಲೆನ್ಸ್ ಗಳನ್ನು ಮಂಗಳೂರಿಗೆ ಬಿಡಲಾಗುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ಈ ವಿಚಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಇದನ್ನು ಬಗೆಹರಿಸುವಂತೆ ಕೇಂದ್ರ ಸರಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿತ್ತು. ಇದೀಗ ಗಡಿಯಲ್ಲಿ ಆಂಬ್ಯುಲೆನ್ಸ್ ಸೇರಿದಂತೆ ಅಗತ್ಯ ಸೇವೆಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಆಂಬ್ಯುಲೆನ್ಸ್ ಗಳಿಗೆ ವಿಧಿಸಿರುವ ಪ್ರಮುಖ ಷರತ್ತುಗಳು:
ಕೇವಲ ಅತ್ಯಂತ ತುರ್ತು ಚಿಕಿತ್ಸೆ ಹಾಗೂ ಅಪಘಾತಗಳ ಚಿಕಿತ್ಸೆ
ಕೇವಲ ಸರಕಾರಿ ಆಂಬ್ಯುಲೆನ್ಸ್ ಗಳ ಮೂಲಕ ಮಾತ್ರ ರೋಗಿಗಳ ಸಾಗಾಟಕ್ಕೆ ಅವಕಾಶ
ಕಾಸರಗೋಡಿನಲ್ಲಿ ಚಿಕಿತ್ಸೆ ದೊರೆಯುದಿಲ್ಲ ಎಂಬ ವೈದ್ಯರ ಪತ್ರ
ಕೊರೊನಾ ಪ್ರಕರಣವಲ್ಲವೆಂದು ವೈದ್ಯರಿಂದ ದೃಢೀಕರಣ
ಆಂಬ್ಯುಲೆನ್ಸ್ ನ್ನು ಸ್ಯಾನಿಟೈಸರ್ ಮಾಡುವುದು
ರೋಗಿಯೊಂದಿಗೆ ಓರ್ವ ಸಹಾಯಕನಿಗೆ ಅವಕಾಶ
ಆಂಬ್ಯುಲೆನ್ಸ್ ಚಾಲಕ ಹಾಗೂ ಒಬ್ಬ ಪ್ಯಾರಮೆಡಿಕ್ಸ್ ಗೆ ಅವಕಾಶ
ತಲಪಾಡಿ ಗಡಿಯಲ್ಲಿ ವೈದ್ಯಕೀಯ ತಂಡದ ನಿಯೋಜನೆ
ರೋಗಿಗಳನ್ನು ನಿಗದಿತ ಚೆಕ್ ಲಿಸ್ಟ್ ನಲ್ಲಿ ಪರಿಶೀಲನೆ ನಡೆಸಿ ಜಿಲ್ಲೆಗೆ ಪ್ರವೇಶಕ್ಕೆ ಅವಕಾಶ