ಮಂಗಳೂರು, ಏ 07 (DaijiworldNews/SM): ದ.ಕ. ಜಿಲ್ಲೆಗೆ ಮಂಗಳವಾರವೂ ಕೂಡ ಖುಷಿಯ ಸುದ್ದಿ ಲಭ್ಯವಾಗಿದ್ದು, ಯಾವುದೇ ಪಾಸಿಟಿವ್ ಪ್ರಕರಣಗಳು ದಾಖಲಾಗಿಲ್ಲ. ಜಿಲ್ಲೆಯಲ್ಲಿ ಕೊರೊನಾ ಸೋಂಕು ನಿಯಂತ್ರಣದಲ್ಲಿದೆ.
ಮಂಗಳವಾರದಂದು ಒಟ್ಟು 10 ಪ್ರಕರಣಗಳ ಪರೀಕ್ಷಾ ವರದಿ ಲಭ್ಯವಾಗಿದ್ದು, ಎಲ್ಲವೂ ನೆಗೆಟಿವ್ ಆಗಿದೆ. ಮಂಗಳವಾರದಂದು ಸುಮಾರು 7 ಪ್ರಕರಣಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಯನ್ನು ನಿರೀಕ್ಷಿಸಲಾಗಿದೆ. ಇನ್ನು ಇಲ್ಲಿಯ ತನಕ ದಾಖಲಾದ 12 ಪ್ರಕರಣಗಳಲ್ಲಿ ನಾಲ್ವರು ಸೋಂಕಿತರು ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.
ಇನ್ನು ಮಂಗಳವಾರದಂದು 49 ಮಂದಿಯನ್ನು ಸ್ಕ್ರೀನಿಂಗ್ ಗೆ ಒಳಪಡಿಸಲಾಗಿದೆ. 3930 ಮಂದಿ ಮನೆಯಲ್ಲಿಯೇ ಕ್ವಾರಂಟೈನ್ ನಲ್ಲಿರುದ್ದಾರೆ. ಇನ್ನು 10 ಮಂದಿ ಇ ಎಸ್ ಐ ಆಸ್ಪತ್ರೆಯಲ್ಲಿ ನಿಗಾದಲ್ಲಿದ್ದಾರೆ. 1989 ಮಂದಿ28 ದಿನಗಳ ಮನೆಯಲ್ಲಿನ ನಿಗಾವನ್ನು ಪೂರೈಸಿದ್ದಾರೆ.
ಇನ್ನು ಈ ನಡುವೆ ಕಾಸರಗೋಡಿನಲ್ಲಿ ಈಗಾಗಲೇ ಸೋಂಕಿತರ ಸಂಖ್ಯೆ 150ಕ್ಕಿಂತ ಹೆಚ್ಚಾಗಿದೆ. ಈ ನಡುವೆ ಕೇರಳದಿಂದ ತುರ್ತು ಚಿಕಿತ್ಸೆಗೆ ಅಂಬ್ಯುಲೆನ್ಸ್ ಗಳು ಆಗಮಿಸಲು ಅವಕಾಶ ಕಲ್ಪಿಸುವ ಮೂಲಕ ಜಿಲ್ಲೆಯ ಜನತೆಯಲ್ಲಿ ಸ್ವಲ್ಪ ಆತಂಕಕ್ಕೆ ಕಾರಣವಾಗಿದೆ. ಎಲ್ಲಾ ರೀತಿಯ ತಪಾಸಣೆಯ ಬಳಿಕ ಆಂಬ್ಯುಲೆನ್ಸ್ ಗಳನ್ನು ಮಂಗಳೂರಿಗೆ ಅವಕಾಶ ಕಲ್ಪಿಸಲಾಗಿದೆ. ಒಂದೊಮ್ಮೆ ತಪಾಸಣೆಯಲ್ಲಿ ಏನಾದರೂ ಲೋಪವಾದರೆ ಜಿಲ್ಲೆಗೆ ಆಪತ್ತು ಕಟ್ಟಿಟ್ಟ ಬುತ್ತಿಯಾಗಿದೆ. ಅಥವಾ ರೋಗಿಗಳಿಗೆ ಅಥವಾ ಅಲ್ಲಿಂದ ರೋಗಿಯೊಂದಿಗೆ ಆಗಮಿಸುವವರಲ್ಲಿ ಏನಾದರೂ ಸೋಂಕು ಇದ್ದು, ತಪಾಸಣೆ ವೇಳೆ ತಿಳಿಯದೇ ಬಳಿಕ ದೃಢಪಟ್ಟಲ್ಲಿ ಕೂಡ ಅಪಾಯವೇ ಇರಲಿದೆ.