ಮಂಗಳೂರು, ಏ 07 (DaijiworldNews/SM): ಕೊರೊನಾ ಮಹಾಮಾರಿ ದೇಶವನ್ನು ತಲ್ಲಣಗೊಳಿಸಿದೆ. ಎಲ್ಲಾ ಸೇವೆಗಳಿಗೆ ಬ್ರೇಕ್ ಬಿದ್ದಿದೆ. ಈ ನಡುವೆ ನ್ಯಾಯಾಲಯದ ಕಲಾಪಕ್ಕೂ ಬ್ರೇಕ್ ಬಿದ್ದಿದೆ. ಆದರೆ ತುರ್ತು ಪ್ರಕರಣಗಳ ವಿಚಾರಣೆಗೆ ಸುಪ್ರೀಂಕೋರ್ಟ್ ಅವಕಾಶ ನೀಡಿದೆ. ಅದರಂತೆ ತುರ್ತು ಪ್ರಕರಣವೊಂದನ್ನು ತಮ್ಮ ಕಚೇರಿಯಿಂದಲೇ ವಾದ ಮಂಡಿಸುವ ಮೂಲಕ ಕಕ್ಷಿದಾರರಿಗೆ ನ್ಯಾಯವೊದಗಿಸಿ ಕೊಟ್ಟವರು, ಮಂಗಳೂರು ಮೂಲದ ಹೈಕೋರ್ಟ್ ನ ವಕೀಲರಾದ ಪಿ.ಪಿ. ಹೆಗ್ಡೆ. ವೀಡಿಯೋ ಕಾನ್ಫರೆನ್ಸ್ ಮೂಲಕ ವಾದ ಮಂಡಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಕೊರೊನಾ ಎಫೆಕ್ಟ್ ಎಲ್ಲಾ ಕ್ಷೇತ್ರದ ಮೇಲೂ ತಟ್ಟಿದ್ದು, ದೇಶದ ನ್ಯಾಯಾಂಗ ವ್ಯವಸ್ಥೆ ಮೇಲೂ ಇದರ ಬಿಸಿ ತಟ್ಟಿದೆ. ಪರಿಣಾಮ ನ್ಯಾಯಾಲಯದ ಕಲಾಪಗಳಿಗೆ ಬ್ರೇಕ್ ಬಿದ್ದಿದೆ. ಆದರೆ, ಅಗತ್ಯ ಹಾಗೂ ತುರ್ತು ಪ್ರಕರಣಗಳ ವಿಚಾರಣೆಗೆ ಸುಪ್ರೀಂಕೋರ್ಟ್ ಅವಕಾಶ ನೀಡಿದೆ. ಏಪ್ರಿಲ್ 6ರಂದು ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಬಳಸಿಕೊಂಡ ಪಿ.ಪಿ. ಹೆಗ್ಡೆಯವರು, ಏಪ್ರಿಲ್ 7ರಂದು ತಮ್ಮ ಮಂಗಳೂರಿನ ಕಚೇರಿಯಿಂದಲೇ ನ್ಯಾಯಮೂರ್ತಿ ವೀರಪ್ಪರವರೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ವಾದ ಮಂಡಿಸಿ ತನ್ನ ಕಕ್ಷಿದಾರನಿಗೆ ನ್ಯಾಯವೊದಗಿಸಿಕೊಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ನ್ಯಾಯಾಲಯದಲ್ಲಿ ಕಕ್ಷಿದಾರ, ವಕೀಲರು ಇಲ್ಲದೇ ನಡೆದ ಪ್ರಕರಣದ ವಿಚಾರಣೆಗೆ ವಕೀಲ ಪಿ.ಪಿ. ಹೆಗ್ಡೆಯವರು ಇಮೇಲ್ ಮೂಲಕ ನ್ಯಾಯಾಲಯಕ್ಕೆ ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದರು. ಬಳಿಕ ವೀಡಿಯೋ ಕಾನ್ಫರೆನ್ಸ್ ಮೂಲಕ ಸಮರ್ಥ ವಾದ ಮಂಡಿಸಿದ್ದಾರೆ. ಹಾಗೂ ನ್ಯಾಯಪೀಠದ ಗಮನ ಸೆಳೆದಿದ್ದಾರೆ. ಪಿ.ಪಿ. ಹೆಗ್ಡೆಯವರ ವಾದವನ್ನು ಪುರಸ್ಕರಿಸಿದ ನ್ಯಾಯಾಲಯ ತಾಯಿ-ಮಕ್ಕಳ ಅಪಹರಣ ಪ್ರಕರಣದ ವಿಚಾರಣೆಗೆ ತಡೆಯಾಜ್ಞೆ ನೀಡಿದೆ.
ಪಿ.ಪಿ. ಹೆಗ್ಡೆಯವರು ಪ್ರಸ್ತುತ ಕರ್ನಾಟಕ ರಾಜ್ಯ ವಕೀಲರ ಸಂಘದ ಅಧ್ಯಕ್ಷರಾಗಿದ್ದಾರೆ. ಆಧುನಿಕ ತಂತ್ರಜ್ಞಾನವನ್ನು ಸಮರ್ಥವಾಗಿ ಅಗತ್ಯ ಸಂದರ್ಭದಲ್ಲಿ ಬಳಕೆ ಮಾಡಿ ಗಮನೆ ಸೆಳೆಯುವಂತೆ ಮಾಡಿದ್ದಾರೆ.
ಏನಿದು ಅಪಹರಣ ಪ್ರಕರಣ:
ಮಂಗಳೂರಿನ ಸುರತ್ಕಲ್ ಠಾಣಾ ವ್ಯಾಪ್ತಿಯಲ್ಲಿ ನಡೆದ ತಾಯಿ ಮಕ್ಕಳ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿ.ಪಿ. ಹೆಗ್ಡೆ ವಾದ ಮಂಡಿಸಿದ್ದಾರೆ. ತಾಯಿ ಹಾಗೂ ಇಬ್ಬರು ಅಪ್ರಾಪ್ತ ಮಕ್ಕಳನ್ನು ಅವರ ಸಂಬಂಧಿಕ ಮಹಮ್ಮದ್ ಸಶೀರ್ ಎಂಬಾತ ಅಪಹರಣ ಮಾಡಿರುವ ಬಗ್ಗೆ ಮಾರ್ಚ್ 15ರಂದು ದೂರು ದಾಖಲಾಗಿತ್ತು. ಪೊಲೀಸರು ಪ್ರಕರಣದ ವಿಚಾರಣೆ ನಡೆಸಿದ್ದರು. ಆದರೆ, ಈ ನಡುವೆ ಅಪಹರಣಕ್ಕೊಳಗಾದ ತಾಯಿ, ವಕೀಲರಾದ ಪಿ.ಪಿ. ಹೆಗ್ಡೆಯವರ ಮೂಲಕ ಹೈಕೋರ್ಟ್ ಮೊರೆ ಹೋಗಿದ್ದರು.
ಪ್ರಕರಣದ ಕುರಿತಂತೆ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾದ ಮಂಡಿಸಿದ ವಕೀಲ ಪಿ.ಪಿ. ಹೆಗ್ಡೆ, ಆ ಮಹಿಳೆ ಮಕ್ಕಳನ್ನು ಯಾರೂ ಕೂಡ ಅಪಹರಿಸಿಲ್ಲ. ಆಕೆಯ ಗಂಡನ ಚಿತ್ರಹಿಂಸೆ, ಕಿರುಕುಳ ತಾಳಲಾರದೆ, ಸ್ವ ಇಚ್ಛೆಯಿಂದ ಮನೆ ಬಿಟ್ಟು ತೆರಳಿದ್ದಾರೆ ಎಂಬುವುದಾಗಿ ವಾದಿಸಿದ್ದಾರೆ. ಹಾಗೂ ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ದಾಖಲಾಗಿರುವ ಅಪಹರಣ ಪ್ರಕರಣದ ವಿಚಾರಣೆಗೆ ತಡೆಯಾಜ್ಞೆ ನೀಡಬೇಕೆಂದು ನ್ಯಾಯಪೀಠದ ಗಮನ ಸೆಳೆದಿದ್ದರು.
ವಕೀಲರ ವಾದ ಆಲಿಸಿದ ನ್ಯಾಯಮೂರ್ತಿಗಳು ಪ್ರಕರಣದ ತನಿಖೆಗೆ ಮಧ್ಯಂತರ ತಡೆ ನೀಡಿದ್ದಾರೆ. ಪ್ರಕರಣದ ಆರೋಪಿಯಾಗಿರುವ ಸಂಶೀರ್ ನನ್ನು ಬಂಧಿಸುವಂತಿಲ್ಲ. ತನ್ನ ತಂದೆ ಅಥವಾ ಗಂಡನೊಂದಿಗೆ ಹೋಗಬೇಕಿಲ್ಲ. ಮಕ್ಕಳನ್ನು ಹಸ್ತಾಂತರ ಮಾಡಬೇಕಿಲ್ಲ ಎಂದು ತೀರ್ಪು ಪ್ರಕಟಿಸಿ ನ್ಯಾಯಾಲಯ ವಿಚಾರಣೆಯನ್ನು ಮುಂದೂಡಿದೆ.